ADVERTISEMENT

ಶಿರಸಿ | ಸಡಗರದ ಮಾರಿಕಾಂಬಾ ಜಾತ್ರೆಗೆ ತೆರೆ

ಅಟ್ಟಲಿನಲ್ಲಿ ಮರಳಿದ ದೇವಿ; ಯುಗಾದಿಯಂದು ಮರು ಪ್ರತಿಷ್ಠೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:45 IST
Last Updated 11 ಮಾರ್ಚ್ 2020, 19:45 IST
ದೇವಿ ವಿಸರ್ಜನೆಯ ನಂತರ ಮಂಟಪ ಕಳಚಿ ದೇವಾಲಯಕ್ಕೆ ಸಾಗಿಸಿದ ಸೇವಾ ಪ್ರತಿನಿಧಿಗಳು
ದೇವಿ ವಿಸರ್ಜನೆಯ ನಂತರ ಮಂಟಪ ಕಳಚಿ ದೇವಾಲಯಕ್ಕೆ ಸಾಗಿಸಿದ ಸೇವಾ ಪ್ರತಿನಿಧಿಗಳು   

ಶಿರಸಿ: ಇಡೀ ರಾಜ್ಯದ ಗಮನ ಸೆಳೆದ ಸಂಭ್ರಮದ ಒಂಬತ್ತು ದಿನಗಳ ಮಾರಿಕಾಂಬಾ ಜಾತ್ರೆ ಬುಧವಾರ ಮುಕ್ತಾಯಗೊಂಡಿತು. ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಆಸೀನಳಾಗಿದ್ದ ದೇವಿಗೆ ಬಾಬುದಾರರು ಕೊನೆಯ ಮಂಗಳಾರತಿ ಬೆಳಗಿದರು.

ಬೆಳಿಗ್ಗೆ 10.18 ಗಂಟೆಯವರೆಗೆ ಭಕ್ತರು ದೇವಿಗೆ ಹಣ್ಣು–ಕಾಯಿ ಅರ್ಪಿಸಿದರು. ನಂತರ ದೇವಾಲಯದ ಬಾಬುದಾರರು ದೇವಿಗೆ ಕೊನೆಯ ಮಂಗಳಾರತಿ ಬೆಳಗಿದರು. ಗದ್ದುಗೆಯ ಆವರಣದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಚಪ್ಪಾಳೆ ತಟ್ಟಿ ಜಾತ್ರೆಯ ಮುಕ್ತಾಯದ ಸಂದೇಶ ಬಿತ್ತರಿಸಿದರು. ಭಕ್ತರ ಜಯಘೋಷದ ನಡುವೆ ದೇವಿ ಗದ್ದುಗೆಯಿಂದ ಕೆಳಗಿಳಿದು, ಜಾತ್ರಾ ಮಂಟಪದ ನಡುವೆ ಬಂದು ಕುಳಿತಾಗ ಆಸಾದಿಯರು ರೈತರಿಗೆ ಹುಲುಸು ಪ್ರಸಾದ ನೀಡಿದರು. ಆ ಪ್ರಸಾದವನ್ನು ಸ್ವೀಕರಿಸಿದ ರೈತರು ಓಡುತ್ತ, ಓಡುತ್ತ ಗದ್ದೆಗೆ ಹೋಗಿ ಅದನ್ನು ಅಲ್ಲಿ ಬಿತ್ತಿ ಬಂದರು.

‘ಹುಲುಸು ಪ್ರಸಾದವನ್ನು ಗದ್ದೆಯಲ್ಲಿ ಬಿತ್ತಿದರೆ ಉತ್ತಮ ಬೆಳೆ ಬರುತ್ತದೆ. ಶಿರಸಿ ತಾಲ್ಲೂಕಿನ ರೈತರು ಮಾತ್ರ ಇದನ್ನು ಸ್ವೀಕರಿಸಲು ಅರ್ಹರು. ಬೇರೆ ಊರಿನವರಿಗೆ ಆಸಾದಿಯರು ಇದನ್ನು ನೀಡುವಂತಿಲ್ಲ. ಹೊಸ ಬಟ್ಟೆಯಲ್ಲಿ ಹುಲುಸು ಪ್ರಸಾದ ಕೊಂಡೊಯ್ಯುವ ಭಕ್ತರು, ಅದನ್ನು ದೇವರ ಪೀಠದಲ್ಲಿ ಇಡುತ್ತಾರೆ. ಕೃಷಿ ಕಾರ್ಯದ ಆರಂಭದಲ್ಲಿ ಹುಲುಸನ್ನು ಬಿತ್ತಿದರೆ, ಒಳ್ಳೆಯ ಬೆಳೆ ಬರುತ್ತದೆ’ ಎಂದು ರೈತ ಗಣಪತಿ ಹೇಳಿದರು.

ADVERTISEMENT

ರಥವನ್ನೇರಿ ಶೋಭಾಯಾತ್ರೆಯಲ್ಲಿ ಜಾತ್ರಾ ಚಪ್ಪರಕ್ಕೆ ಬಂದಿದ್ದ ದೇವಿ, ಕಟ್ಟಿಗೆಯ ಅಟ್ಟಲಿನ ಮೇಲೆ ಕುಳಿತು ಭಕ್ತರ ಹೆಗಲನೇರಿ ಮರಳಿದಳು. ದುಷ್ಟ ಸಂಹಾರ ಮಾಡಿದ ದೇವಿ, ಆವೇಶದಲ್ಲಿ ಜಾತ್ರಾ ಚಪ್ಪರವನ್ನು ತ್ಯಜಿಸಿ ಹೊರಬರುತ್ತಾಳೆ ಎಂಬ ಜನಪದ ಕಥೆಯ ಹಿನ್ನೆಲೆಯಲ್ಲಿ, ರಥವನ್ನು ದಾಟಿದ ನಂತರ ಬೆಂಕಿ ಹಚ್ಚಿದ ಮಾತಂಗಿ ಚಪ್ಪರದೆಡೆಗೆ ದೇವಿಯ ನೋಟ ಕಾಣುವಂತೆ, ಒಮ್ಮೆ ಅಟ್ಟಲನ್ನು ಅತ್ತ ಕಡೆ ತಿರುಗಿಸಲಾಯಿತು.

ಇದರಿಂದ ಭಾವೋದ್ವೇಗಕ್ಕೆ ಒಳಗಾದ ಅನೇಕ ಭಕ್ತರು ಕಣ್ಣೀರು ಸುರಿಸಿದರು. ಬನವಾಸಿ ರಸ್ತೆಯ ವಿಸರ್ಜನಾ ಪೀಠದಲ್ಲಿ ದೇವಿಯ ದೇವಿಯ ವಿಸರ್ಜನೆ ಜರುಗಿತು. ರಥೋತ್ಸವಕ್ಕೆ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಮಂಗಲೋತ್ಸವ ವೀಕ್ಷಿಸಲು ಬಂದಿದ್ದರು. ಮಾರಿಕಾಂಬಾ ದೇವಿಯ ಪುನರ್‌ ಪ್ರತಿಷ್ಠಾಪನೆ ಯುಗಾದಿಯಂದು ನಡೆಯಲಿದೆ. ಅಲ್ಲಿಯ ತನಕ ಶಿರಸಿ ಮಾರಿಕಾಂಬಾ ದೇವಾಲಯದ ಬಾಗಿಲು ಮುಚ್ಚಿರುತ್ತದೆ.

ಎಲ್ಲವೂ ಅಚ್ಚುಕಟ್ಟು

ಜಾತ್ರೆಯ ಮಂಗಲೋತ್ಸವ ಕಾರ್ಯಗಳು ಮಾದರಿಯಾಗಿವೆ. ತೀವ್ರ ಜನದಟ್ಟಣಿಯ ನಡುವೆ ಕೂಡ ಎಲ್ಲ ಪ್ರಕ್ರಿಯೆಗಳು ಅಚ್ಚುಕಟ್ಟಾಗಿ ನಡೆದವು. ಗದ್ದುಗೆಯಲ್ಲಿ ದೇವಿಯ ವಿಸರ್ಜನೆ ನಡೆದ ನಂತರ, ತಲೆಗೆ ಹಸಿರು, ಹಳದಿ, ಕೆಂಪು ಬಣ್ಣದ ರವಿಕೆ ವಸ್ತ್ರಗಳನ್ನು ತಲೆಗೆ ಕಟ್ಟಿದ್ದ ನೂರಾರು ಬಾಬುದಾರರು, ಸೇವಾ ಪ್ರತಿನಿಧಿಗಳು, ದೇವಿಗೆ ಸೇರಿದ ಸಾಮಗ್ರಿಗಳನ್ನು ಶಿಸ್ತುಬದ್ಧವಾಗಿ ವಾಹನಕ್ಕೆ ತುಂಬಿದರು.

ಜನದಟ್ಟಣಿಯ ನಡುವೆಯೇ ವಾಹನವೊಂದು ಜಾತ್ರಾ ಚಪ್ಪರದೆದುರು ಬಂದು ನಿಂತಿತು. ದೇವಿಯ ಮಂಟಪದ ಬಿಡಿಭಾಗ, ಕಂಬ, ಕಾಣಿಕೆ ಹುಂಡಿ, ಹಲಗೆ ಎಲ್ಲವೂ ಒಂದೊಂದಾಗಿ ಈ ವಾಹನವೇರಿದವು. ರುಮಾಲುಧಾರಿ ಯುವಕರು ಅವೆಲ್ಲವನ್ನೂ ತಂದು ಅಚ್ಚುಕಟ್ಟಾಗಿ ವಾಹನಕ್ಕೆ ತುಂಬಿದರು. ಭರ್ತಿಯಾದ ವಾಹನ ದೇವಾಲಯದ ಕಡೆಗೆ ಮುಖ ಮಾಡಿತು. ಅವನ್ನೆಲ್ಲ ದೇವಾಲಯದಲ್ಲಿ ಇಳಿಸಿ, ಮತ್ತೆ ಬಂದ ವಾಹನ, ದೇವಿಗೆ ಸಂಬಂಧಪಟ್ಟ ಎಲ್ಲ ಸಾಮಗ್ರಿಗಳನ್ನು ಕೊಂಡೊಯ್ದಿತು. ಚಪ್ಪರದ ಮಧ್ಯಭಾಗಕ್ಕೆ ಬಂದು ಕುಳಿತಿದ್ದ ದೇವಿ ಇವೆಲ್ಲಕ್ಕೂ ಸಾಕ್ಷಿಯಾದಳು.

ಜಾತ್ರೆಯ ವ್ಯವಸ್ಥೆಗೆ ಮೆಚ್ಚುಗೆ

ರಾಜ್ಯ ಪ್ರಸಿದ್ಧ ಜಾತ್ರೆಯ ಆರಂಭದ ಎರಡು ದಿನ ಜನದಟ್ಟಣಿ ಕೊಂಚ ಕಡಿಮೆಯಿತ್ತು. ಕೋವಿಡ್ –19 ಭಯದಿಂದ ಜನರ ಭೇಟಿ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ನಂತರ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡಿದರು. ಜನದಟ್ಟಣಿ, ವಾಹನ ದಟ್ಟಣಿ ನಿಯಂತ್ರಿಸುವುದೇ ಪೊಲೀಸರಿಗೆ ಹರಸಾಹಸವಾಯಿತು.

ದೇವಿ ದರ್ಶನಕ್ಕೆ ಸಿದ್ಧಪಡಿಸಿದ್ದ ಪಾಸ್‌ಗಳು ನಕಲಿ ಮಾಡಲು ಸಾಧ್ಯವಾಗದಂತೆ ದೇವಾಲಯದ ಆಡಳಿತ ಮಂಡಳಿ ರೂಪಿಸಿದ್ದ ಯೋಜನೆ ಯಶಸ್ವಿಯಾಯಿತು. ಹೊಸ ಕ್ರಮವನ್ನು ಅನೇಕರು ಪ್ರಶಂಸಿಸಿದರು. ಅಂತೆಯೇ ಮಾಧ್ಯಮ ಸೇರಿದಂತೆ ಪ್ರತಿ ವಿಭಾಗಕ್ಕೂ ಪ್ರತ್ಯೇಕ ಬಣ್ಣದ ಪಾಸ್‌ಗಳನ್ನು ನೀಡಿದ್ದು, ಆಯಾ ವಿಭಾಗದವರನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.