ADVERTISEMENT

ಹಾಲು ಪ್ಯಾಕಿಂಗ್ ಘಟಕ ನಾಳೆ ಲೋಕಾರ್ಪಣೆ

ಧಾಮುಲ್ ಅಧ್ಯಕ್ಷ ಶಂಕರ ಮುಗದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 15:58 IST
Last Updated 3 ಏಪ್ರಿಲ್ 2022, 15:58 IST
ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿ ನಿರ್ಮಾಣಗೊಂಡಿರುವ ಹಾಲು ಪ್ಯಾಕಿಂಗ್ ಘಟಕವನ್ನು ಧಾಮುಲ್ ಅಧ್ಯಕ್ಷ ಶಂಕರ ಮುಗದ ವೀಕ್ಷಿಸಿದರು. ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನಿರ್ದೇಶಕ ಶಂಕರ ಭಟ್, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ ಇದ್ದರು
ಶಿರಸಿ ತಾಲ್ಲೂಕಿನ ಹನುಮಂತಿಯಲ್ಲಿ ನಿರ್ಮಾಣಗೊಂಡಿರುವ ಹಾಲು ಪ್ಯಾಕಿಂಗ್ ಘಟಕವನ್ನು ಧಾಮುಲ್ ಅಧ್ಯಕ್ಷ ಶಂಕರ ಮುಗದ ವೀಕ್ಷಿಸಿದರು. ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನಿರ್ದೇಶಕ ಶಂಕರ ಭಟ್, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ ಇದ್ದರು   

ಶಿರಸಿ: ತಾಲ್ಲೂಕಿನ ಹನುಮಂತಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪನೆಯಾಗಿರುವ ರಾಜ್ಯದ ಮೊದಲ ಹಾಲು ಪ್ಯಾಕಿಂಗ್ ಘಟಕ ಏ.5 ಕ್ಕೆ ಉದ್ಘಾಟನೆಯಾಗಲಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಘಟಕವು ನಿತ್ಯ ಸರಾಸರಿ 50 ಸಾವಿರ ಹಾಲು ಪೊಟ್ಟಣಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಅಗತ್ಯ ಬಿದ್ದರೆ 1 ಲಕ್ಷಕ್ಕೂ ಇದನ್ನು ಏರಿಕೆ ಮಾಡುವ ಸೌಲಭ್ಯ ಹೊಂದಿದೆ’ ಎಂದರು.

‘ಜಿಲ್ಲೆಯಲ್ಲಿ ಶೇಖರಣೆಯಾದ ಹಾಲನ್ನು ಧಾರವಾಡದ ಮುಖ್ಯ ಡೇರಿಗೆ ಸಾಗಿಸಿ, ಸಂಸ್ಕರಿಸಿ, ನಂತರ ಉತ್ತರಕನ್ನಡದ ಮಾರುಕಟ್ಟೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಹಾಲು ಪ್ಯಾಕಿಂಗ್ ಘಟಕದಿಂದ ಈ ಸಮಸ್ಯೆ ತಪ್ಪಿದೆ. ಇದರಿಂದ ಒಕ್ಕೂಟಕ್ಕೆ ₹2.5 ಕೋಟಿಯಷ್ಟು ಉಳಿತಾಯವೂ ಆಗುವ ಅಂದಾಜಿದೆ’ ಎಂದು ತಿಳಿಸಿದರು.

ADVERTISEMENT

‘ಉತ್ತರಕನ್ನಡದಲ್ಲಿ ನಿತ್ಯ ಸರಾಸರಿ 45 ಸಾವಿರ ಲೀ. ಹಾಲು ಶೇಖರಣೆ ಮಾಡಲಾಗುತ್ತಿದ್ದು, ಅಂದಾಜು 40 ಸಾವಿರ ಲೀ. ಹಾಲು ಹಾಗೂ 5 ಸಾವಿರ ಲೀ. ಮೊಸರು, ನಂದಿನಿ ಇತರ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೋಳಿ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಧಾಮುಲ್ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ನಿರ್ದೇಶಕ ಶಂಕರ ಭಟ್, ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಲೋಹಿತೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.