ADVERTISEMENT

ಮಳೆಗಾಲ ಮತ್ತಷ್ಟು ಎಚ್ಚರಿಕೆ ಅಗತ್ಯ

ಶಾಲೆಗಳ ಪುನರಾರಂಭ ಬಗ್ಗೆ ಅಭಿಪ್ರಾಯ ತಿಳಿಸಿ: ಸಚಿವ ಶ್ರೀರಾಮುಲು ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 3:31 IST
Last Updated 9 ಜೂನ್ 2020, 3:31 IST
ಕಾರವಾರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಇನ್ನು ಮುಂದೆ ಮಳೆಗಾಲವಿರುವ ಕಾರಣ ಕೊರೊನಾ ವೈರಸ್ ನಿಯಂತ್ರಣಕ್ಕೆ ಮತ್ತಷ್ಟು ಕ್ರಮಗಳು ಅಗತ್ಯ. ಅದೇರೀತಿ, ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ನಿಮ್ಮ ಅಭಿಪ್ರಾಯವನ್ನುಲಿಖಿತವಾಗಿ ತಿಳಿಸಿ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೋವಿಡ್ 19 ನಿಯಂತ್ರಣ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‌

ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಸಂಪೂರ್ಣ ಜಾಗೃತಿ ಮೂಡಲು ಏನೇನು ಕ್ರಮ ಕೈಗೊಳ್ಳಬೇಕು ಹಾಗೂ ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತಿಸಬೇಕು ಎಂದು ಇದೇವೇಳೆ ತಿಳಿಸಿದರು.

ADVERTISEMENT

‘ರಾಜ್ಯದ ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಣೆ ಮಾಡಲಾಗುತ್ತಿದೆ. ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕೇಂದ್ರೀಕೃತ ಆಮ್ಲಜನಕ ಪೂರೈಕೆ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ವೈದ್ಯರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ‌’ ಎಂದು ತಿಳಿಸಿದರು.

‘ಕೊರೊನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ ಇತರ ಕಾಯಿಲೆಗಳನ್ನು ನಿರ್ಲಕ್ಷಿಸಬಾರದು. ಜಿಲ್ಲೆಯಲ್ಲಿರುವ ಬೇರೆ ಕಾಯಿಲೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿ. ಕೊರೊನಾದ ನಿಯಂತ್ರಣ ಇಷ್ಟುದಿನ ಉತ್ತಮ ರೀತಿಯಲ್ಲಾಗಿದೆ’ ಎಂದು ಮೆಚ್ಚುಗೆ ಸೂಚಿಸಿದರು.

ಹೊಸ ಅಧ್ಯಯನ ಅಗತ್ಯ: ‘ಮಂಗನಕಾಯಿಲೆಗೆ ಹಳೆಯ ತಂತ್ರಜ್ಞಾನದಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಹೊಸ ಅಧ್ಯಯನ ಆಗಬೇಕಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಚೆನ್ನಾಗಿದೆ. ಒಟ್ಟು 96 ಪ್ರಕರಣಗಳ ಪೈಕಿ ಈಗ ಕೇವಲ 22 ಸಕ್ರಿಯವಾಗಿವೆ. ಚಿಕಿತ್ಸೆ ಪಡೆಯುತ್ತಿದ್ದ ಎಂಟು ಮಂದಿ ಗುಣಮುಖರಾಗಿದ್ದು, ಜೂನ್ 9ರಂದು ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

‘ಈವರೆಗೆ ಜಿಲ್ಲೆಯ 6,109 ಮಂದಿಯ ಗಂಟಲುದ್ರವದ ಪರೀಕ್ಷೆ ಮಾಡಲಾಗಿದೆ.ಕಾರವಾರದಲ್ಲಿ ಸ್ಥಾಪಿಸಲಾಗಿರುವ ಪ್ರಯೋಗಾಲಯವು ಸೋಮವಾರದಿಂದ ಪರಿಪೂರ್ಣವಾಗಿ ಕಾರ್ಯಾರಂಭ ಮಾಡಿದೆ. ಅಗತ್ಯವಿದ್ದರೆ ಏಕಕಾಲದಲ್ಲಿ 2 ಸಾವಿರ ಮಂದಿಗೆ ಚಿಕಿತ್ಸೆ ನೀಡುವಂಥ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಹೊಂದಲಾಗಿದೆ’ ಎಂದರು.

‘ನೇಮಕಾತಿಗೆ ಪ್ರಯತ್ನ’:‌‘ಅಂಕೋಲಾ ತಾಲ್ಲೂಕು ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಹುದ್ದೆ ಖಾಲಿಯಿದ್ದು, ಸಮಸ್ಯೆಯಾಗಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಸಚಿವರ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ‘ಹೊಸ ವೈದ್ಯರ ನೇಮಕಾತಿ ಆಗುವ ತನಕ ಹತ್ತಿರದ ಆಸ್ಪತ್ರೆಗಳಲ್ಲಿರುವ ವೈದ್ಯರನ್ನು ವಾರದಲ್ಲಿ ಮೂರು ದಿನ ಬರಲು ಸೂಚಿಸಿ. ಹೊಸ ನೇಮಕಾತಿಗೂ ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ವೇದಿಕೆಯಲ್ಲಿದ್ದರು.

* ರಾಜ್ಯದಲ್ಲಿ ಇನ್ನೆರಡು ತಿಂಗಳಲ್ಲಿ 82 ಸಾವಿರ ಹೆರಿಗೆಗಳಾಗುವ ಅಂದಾಜಿದೆ. ಅವರಿಗೆ ರೋಗ ಲಕ್ಷಣಗಳಿದ್ದರೆ ಮಾತ್ರ ಕೋವಿಡ್ 19 ಪರೀಕ್ಷೆ ಮಾಡಿದರೆ ಸಾಕು.

– ಶ್ರೀರಾಮುಲು,‌ಆರೋಗ್ಯ ಸಚಿವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.