ಮುಂಡಗೋಡ: ತಾಲ್ಲೂಕಿನ ಇಂದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಇದೇ ಶಾಲೆಯಲ್ಲಿ ನಿವೃತ್ತಿಯಾದ ಶಿಕ್ಷಕರು, ಈ ಶಾಲೆಯಿಂದ ಬೇರೆಡೆಗೆ ವರ್ಗಾವಣೆಗೊಂಡು ಹೋಗಿರುವ ಶಿಕ್ಷಕರು, ಇದ್ದೂರಲ್ಲಿಯೇ ಇರುವ ಹಳೆಯ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕಾರವಾರ, ಬೆಂಗಳೂರು, ಅಮೇರಿಕ, ಶಿರಸಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಉದ್ಯೋಗದಲ್ಲಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು, ಆ ದಿನಗಳನ್ನು ನೆನಪಿಸಿಕೊಂಡು, ನೆನಪಿನ ಬುತ್ತಿಯನ್ನು ನೆರೆದವರ ಮುಂದೆ ಬಿಚ್ಚಿಟ್ಟರು.
ಕೆಲವು ವಿದ್ಯಾರ್ಥಿಗಳು ಮಾತನಾಡಿ, ʼಉಸಿರು ಇರುವವರೆಗೂ ಇಂತಹ ಶಿಕ್ಷಕರನ್ನು ಮರೆಯುವುದಿಲ್ಲ. ಅವರ ಒಂದೊಂದು ಮಾತು, ಇಂದಿನ ಯಶಸ್ವಿ ಜೀವನದ ಮೆಟ್ಟಿಲುಗಳಾಗಿವೆ ಎಂದರು.
ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಆರಂಭಿಸಿ, ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ, ಇಲ್ಲಿಯೇ ನಿವೃತ್ತಿ ಹೊಂದಿದ ಶಿಕ್ಷಕ ತಿಮ್ಮನಾಯಕ ಅವರ ಹೆಸರು ಹೇಳಿದಾಗ, ಇಡೀ ಸಭಾಂಗಣದಲ್ಲಿ ಜಯಘೋಷಗಳು ಮೊಳಗಿದವು. ಅವರು ವೇದಿಕೆ ಏರುವಾಗಲೂ, ಅತಿಥಿಗಳು ಅಭಿಮಾನದಿಂದ ಸ್ವಾಗತಿಸಿದರು. ಅಮೃತ ಮಹೋತ್ಸವದ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ತಿಮ್ಮನಾಯಕ, ʼವರ್ಗಾವಣೆಗೆ ಅವಕಾಶ ಇದ್ದರೂ, ನಾನು ಈ ಶಾಲೆಯನ್ನು ಬಿಟ್ಟು ಹೋಗಲಿಲ್ಲ. ಊರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತಿಳಿದಷ್ಟು ಪ್ರಾಮಾಣಿಕತೆಯಿಂದ ಕಲಿಸಿದ್ದೇನೆ. ನಿವೃತ್ತಿ ನಂತರ ಬಾಗಲಕೋಟೆಯಲ್ಲಿ ನೆಲೆಸಿದರೂ, ಕಲಿಸಿದ ಶಾಲೆಯ ನೆನಪು ಆಗಾಗ ಮರುಕಳಿಸುತ್ತದೆ. ಶಿಕ್ಷಕರಿಗೆ ಸೇವೆ ಸಲ್ಲಿಸುವುದು ಮುಖ್ಯವಲ್ಲ. ಆದರೆ, ಊರಿನ ಜನರೊಂದಿಗೆ ಒಂದಾಗಿ ಮಕ್ಕಳಿಗೆ ಬೋಧನೆ ಮಾಡುತ್ತ, ಶಾಲಾ ಪರಿಸರವನ್ನು ಮಕ್ಕಳ ಸ್ನೇಹಿ ಪರಿಸರ ಮಾಡುವುದೇ ಯಶಸ್ವಿ ಶಿಕ್ಷಕನ ಗುರಿಯಾಗಬೇಕುʼ ಎಂದರು.
ಶಿಕ್ಷಕ ವಿಲ್ಸನ್ ಮಾತನಾಡಿ, ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಏನಾದರೂ ಸಾಧನೆ ಮಾಡಿದಾಗ, ಕಲಿಸಿದ ಶಿಕ್ಷಕರನ್ನು ಸ್ಮರಿಸಿಕೊಂಡರೆ ಅದಕ್ಕಿಂತ ದೊಡ್ಡ ಸನ್ಮಾನ ಮತ್ತೊಂದು ಇರುವುದಿಲ್ಲ ಎಂದರು.
ಹಳೆಯ ವಿದ್ಯಾರ್ಥಿಗಳು, ಶಿಕ್ಷಕರನ್ನು ಅಭಿಮಾನದಿಂದ ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ ಹೆಗಡೆ, ಜನಪದ ಕಲಾವಿದ ಸಹದೇವಪ್ಪ ನಡಿಗೇರ, ಅಶೋಕ ಪಾಲೇಕರ, ಯಮನಪ್ಪ ಮಾರಂಬೀಡ, ಮಹ್ಮದ ರಫೀಕ ದೇಸಳ್ಳಿ, ದೇವೇಂದ್ರ ಕೆಂಚಗೊಣ್ಣನವರ, ಧರ್ಮರಾಜ ನಡಿಗೇರ, ರಮೇಶ ಅಂಬಿಗೇರ, ಸುಭಾಷ್ ಡೋರಿ, ಶೀಲಾ ರಾಠೋಡ, ಬಿಸ್ಟನಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.