ADVERTISEMENT

ಚೈನು ಕಳ್ಳನ ಬಂಧನ: ₹ 1ಲಕ್ಷ ಮೌಲ್ಯದ ಆಭರಣ ವಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 14:21 IST
Last Updated 22 ಫೆಬ್ರುವರಿ 2020, 14:21 IST
ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ ಆರೋಪಿ (ಕೆಳಗೆ ಕುಳಿತವ) ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರು (ನಿಂತವರು)
ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ ಆರೋಪಿ (ಕೆಳಗೆ ಕುಳಿತವ) ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರು (ನಿಂತವರು)   

ಶಿರಸಿ: ನಡೆದುಕೊಂಡು ಹೋಗುವ ಮಹಿಳೆಯರ ಮೇಲೆ ದಾಳಿ ನಡೆಸಿ, ಅವರ ಮೈಮೇಲಿದ್ದ ಬಂಗಾರದ ಆಭರಣಗಳನ್ನು ದೋಚುತ್ತಿದ್ದ ಕಳ್ಳನನ್ನು ಇಲ್ಲಿ ಮಾರುಕಟ್ಟೆ ಠಾಣೆಯ ಪೊಲೀಸರು ಶನಿವಾರ ಬಂಧಿಸಿ, ₹ 1 ಲಕ್ಷ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ.

ಕುಮಟಾ ತಾಲ್ಲೂಕು ಮಾಸೂರಿನ ಗೋವಿಂದ ಗೌಡ (40) ಬಂಧಿತ ಆರೋಪಿ. ‘ಈತನು ಶಿರಸಿ, ಕುಮಟಾ ಹಾಗೂ ಇತರೆಡೆಗಳಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸಿ, ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಸರ, ಮಂಗಲಸೂತ್ರ, ಕೈಯಲ್ಲಿದ್ದ ಉಂಗುರಗಳನ್ನು ದೋಚುತ್ತಿದ್ದ. ಬಂಧಿತ ಆರೋಪಿಯಿಂದ ₹ 25ಸಾವಿರ ಬೆಲೆಬಾಳುವ ಬಜಾಜ್ ಮೋಟರ್ ಬೈಕ್, ₹ 7000 ಮೌಲ್ಯದ ಕಿವಿಯೋಲೆ, ಉಂಗುರ, ₹ 42ಸಾವಿರ ಮೌಲ್ಯದ ಸರ, ₹ 52ಸಾವಿರ ಮೌಲ್ಯದ ಎರಡು ಮಂಗಲಸೂತ್ರ ವಶಪಡಿಸಿಕೊಳ್ಳಲಾಗಿದೆ’ ಎಂದು ಡಿವೈಎಸ್ಪಿ ಜಿ.ಟಿ.ನಾಯಕ ತಿಳಿಸಿದರು.

ಫೆ.12ರಂದು ಇಲ್ಲಿನ ಕಸ್ತೂರಬಾ ನಗರದಲ್ಲಿ ಇದೇ ಆರೋಪಿ ಮಹಿಳೆಯೊಬ್ಬರ ಚೈನು ಹರಿದು ಪರಾರಿಯಾಗಿದ್ದ. ಮಾರುಕಟ್ಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ, ಆರೋಪಿಯು ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಮಾಹಿತಿ ದೊರೆತಿದೆ. ಹಿರಿಯ ಅಧಿಕಾರಿಗಲು, ಸಿಪಿಐ ಪ್ರದೀಪ ಯು.ಬಿ ಮಾರ್ಗದರ್ಶನದಲ್ಲಿ, ಪಿಎಸ್ಐ ನಾಗಪ್ಪ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.