ADVERTISEMENT

ಶಿರಸಿ: ಅರ್ಧಕ್ಕೆ ನಿಂತ ಅಧಿಕಾರಿ ವಸತಿಗೃಹ!

ಐದು ವರ್ಷಗಳಲ್ಲಿ ಲಕ್ಷಾಂತರ ವೆಚ್ಚ: ಅನುದಾನ ಸಾಲದೆ ಕಾಮಗಾರಿ ಸ್ಥಗಿತ

ಗಣಪತಿ ಹೆಗಡೆ
Published 6 ಅಕ್ಟೋಬರ್ 2022, 19:30 IST
Last Updated 6 ಅಕ್ಟೋಬರ್ 2022, 19:30 IST
ಶಿರಸಿಯ ಸಾಮರ್ಥ್ಯ ಸೌಧದ ಪಕ್ಕ ನಿರ್ಮಾಣಗೊಂಡಿರುವ ವಸತಿಗೃಹ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು
ಶಿರಸಿಯ ಸಾಮರ್ಥ್ಯ ಸೌಧದ ಪಕ್ಕ ನಿರ್ಮಾಣಗೊಂಡಿರುವ ವಸತಿಗೃಹ ನಿರ್ಮಾಣ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದು   

ಶಿರಸಿ: ಇಲ್ಲಿನ ಸಾಮರ್ಥ್ಯ ಸೌಧದ ಪಕ್ಕದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ವಾಸಕ್ಕೆ ವಸತಿಗೃಹ ನಿರ್ಮಿಸುವ ಕಾಮಗಾರಿ ಐದು ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

2016–17ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯ್ತಿ ಅನುದಾನದಲ್ಲಿ ವಸತಿಗೃಹ ನಿರ್ಮಿಸುವ ಕೆಲಸ ಆರಂಭಗೊಂಡಿತ್ತು. ಅಭಿವೃದ್ಧಿಯ ಕಾಮಗಾರಿಗೆ ಅನುದಾನ ಒದಗಿಸುವುದನ್ನು ಬಿಟ್ಟು ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ವೆಚ್ಚ ಮಾಡುತ್ತಿರುವುದಕ್ಕೆ ಕೆಲ ಸದಸ್ಯರು ಅಪಸ್ವರ ಎತ್ತಿದ್ದಕ್ಕೆ ಕೆಲಸ ಅರ್ಧಕ್ಕೆ ನಿಂತಿತ್ತು.

ಬಳಿಕ ಬದಲಾದ ಅಧಿಕಾರಿಗಳು ಪುನಃ ವಸತಿಗೃಹ ನಿರ್ಮಿಸುವ ಕೆಲಸವನ್ನು ಮುಂದುವರೆಸಿದರಾದರೂ ಅನುದಾನದ ಕೊರತೆ ಎದುರಾದ ಕಾರಣ ಕೆಲಸ ಅರ್ಧಕ್ಕೆ ಕೈಬಿಡಲಾಗಿದೆ. ವಸತಿಗೃಹ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ನೆಲಹಾಸು ಅಳವಡಿಕೆ, ಮನೆಯ ಒಳಾಂಗಣ ನಿರ್ಮಿಸುವ ಕೆಲಸ ಮಾತ್ರವೇ ಬಾಕಿ ಉಳಿದುಕೊಂಡಿದೆ. ಕಟ್ಟಡಕ್ಕೆ ಅಳವಡಿಸಲು ಪೂರೈಕೆಯಾದ ಪೀಠೋಪಕರಣ, ಸಾಮಗ್ರಿಗಳು ಕಟ್ಟಡದೊಳಗೆ ದೂಳು ಹಿಡಿಯುತ್ತಿವೆ.

ADVERTISEMENT

‘ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಅವರ ಈ ಹಿಂದಿನ ವಸತಿಗೃಹ ಶಿಥಿಲಗೊಂಡಿದ್ದ ಕಾರಣ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಅನುದಾನ ಲಭ್ಯತೆ ಆಧರಿಸಿ ವಸತಿಗೃಹ ನಿರ್ಮಾಣಕ್ಕೆ ವೆಚ್ಚ ಮಾಡಲಾಗಿದೆ. ಕಟ್ಟಡ ಪೂರ್ಣಗೊಳಿಸಲು ಅನುದಾನ ಲಭಿಸದೆ ಕೆಲಸ ಅರ್ಧಕ್ಕೆ ನಿಂತಿದೆ’ ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಯೊಬ್ಬರು ತಿಳಿಸಿದರು.

‘ಅಭಿವೃದ್ಧಿ ಯೋಜನೆಗಳಿಗೆ ತಾಲ್ಲೂಕು ಪಂಚಾಯ್ತಿಗೆ ಬರುವ ಅನುದಾನವೇ ಸೀಮಿತವಾಗಿದೆ. ಜನರಿಗೆ ಉಪಯೋಗವಾಗುವ ಕಾಮಗಾರಿಗಳ ಬದಲು ಅಧಿಕಾರಿಗಳು ತಮ್ಮ ವಾಸಕ್ಕೆ ಐಷಾರಾಮಿ ಕಟ್ಟಡ ನಿರ್ಮಿಸಿಕೊಳ್ಳಲು ಮುಂದಾಗಿದ್ದಕ್ಕೆ ಹಲವು ಬಾರಿ ಆಕ್ಷೇಪಿಸಲಾಗಿದೆ. ಕೆಲವು ಸದಸ್ಯರು ಆಕ್ಷೇಪಿಸಿದ್ದರ ನಡುವೆಯೂ ಕಾಮಗಾರಿ ನಡೆದು ಈಗ ಅರ್ಧಕ್ಕೆ ನಿಂತಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಜನರ ತೆರಿಗೆ ಹಣ ಪೋಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಅರುಣ ಗೌಡ ಆಕ್ಷೇಪಿಸಿದರು.

ಅನುದಾನದ ಕೊರತೆಯಿಂದ ವಸತಿಗೃಹ ಕೆಲಸ ಸ್ಥಗಿತಗೊಂಡಿದೆ. ಕಾಮಗಾರಿ ಮುಂದುವರೆಸಲು ಅನುದಾನ ಲಭ್ಯತೆಯ ನಿರೀಕ್ಷೆಯಲ್ಲಿದ್ದೇವೆ.

ದೇವರಾಜ ಹಿತ್ತಲಕೊಪ್ಪ

ತಾ. ಪಂ. ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.