ADVERTISEMENT

ಗೋಯರ್‌ಗೆ ಪಕ್ಕಾ ರಸ್ತೆಯ ಕನವರಿಕೆ

ಕಾಡಿನ ಮಧ್ಯೆ ಸುಂದರ ಊರು: ಮೂಲ ಸೌಕರ್ಯಗಳಿಂದ ದೂರವುಳಿದ ಗ್ರಾಮ

ಸದಾಶಿವ ಎಂ.ಎಸ್‌.
Published 23 ಸೆಪ್ಟೆಂಬರ್ 2021, 15:12 IST
Last Updated 23 ಸೆಪ್ಟೆಂಬರ್ 2021, 15:12 IST
ಕಾರವಾರ ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯರ್‌ಗೆ ಸಾಗುವ ಕಚ್ಚಾ ರಸ್ತೆಯಲ್ಲಿ ಕೆಸರು ತುಂಬಿದ್ದು, ಪ್ರಯಾಣ ದುಸ್ತರವಾಗಿದೆ
ಕಾರವಾರ ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯರ್‌ಗೆ ಸಾಗುವ ಕಚ್ಚಾ ರಸ್ತೆಯಲ್ಲಿ ಕೆಸರು ತುಂಬಿದ್ದು, ಪ್ರಯಾಣ ದುಸ್ತರವಾಗಿದೆ   

ಕಾರವಾರ: ದಟ್ಟವಾದ ಕಾಡಿನ ನಡುವೆ ಸಾಗುವ ಕಚ್ಚಾ ರಸ್ತೆ. ಕಾಲಿಟ್ಟರೆ ಜಾರಿ ಬೀಳುವ ಆತಂಕ. ಶಾಲೆ, ಅಂಗನವಾಡಿಗೆ ಶಿಕ್ಷಕರು ಮನೆಗಳಿಂದ ದ್ವಿಚಕ್ರ ವಾಹನದಲ್ಲಿ ಬಂದರೂ ಕಿಲೋಮೀಟರ್‌ಗಟ್ಟಲೆ ನಡೆಯುವ ಅನಿವಾರ್ಯತೆ. ಯಾರನ್ನಾದರೂ ಸಂಪರ್ಕಿಸಲು ಮೊಬೈಲ್ ಫೋನ್ ನೆಟ್‌ವರ್ಕ್ ಕೂಡ ಸಿಗುವುದಿಲ್ಲ.

ಇದು ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯರ್ ಗ್ರಾಮದ ಸ್ಥಿತಿ. ಗ್ರಾಮದ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು, ಗರ್ಭಿಣಿಯರು... ಎಲ್ಲರೂ ನಡೆದೇ ಸಾಗಬೇಕಿದೆ. ಗ್ರಾಮಸ್ಥರು ಪಡಿತರ ತರಲು ಸುಮಾರು 10 ಕಿಲೋಮೀಟರ್ ದೂರದ ಗೋಟೆಗಾಳಿಗೆ ಹೋಗುತ್ತಾರೆ. ಪ್ರಾಥಮಿಕ ಆರೋಗ್ಯ ಸೇವೆಗೆ ಉಳಗಾಕ್ಕೆ ತೆರಳುತ್ತಾರೆ.

ಗ್ರಾಮದ ಆರಂಭದಲ್ಲಿ ಹರಿಯುವ ಸಾಕಳಿ ನದಿಗೆ 2019ರಲ್ಲಿ ಸೇತುವೆ ನಿರ್ಮಾಣವಾಗಿದೆ. ಅದರಿಂದ ಆಚೆಗೆ ಊರೊಳಗೆ ಐದು ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ಸಾಗಬೇಕು. ಗ್ರಾಮದಲ್ಲಿ ಬಹುತೇಕ ಕುಟುಂಬಗಳಿಗೆ ಕೃಷಿಯೇ ಮೂಲವೃತ್ತಿಯಾಗಿದೆ. ಹಲವರು ಮಲ್ಲಾಪುರ, ಕಾರವಾರದಲ್ಲಿ ದಿನಗೂಲಿಗೆ, ಗುತ್ತಿಗೆ ನೌಕರಿ ಮಾಡುತ್ತಾರೆ. ರಸ್ತೆಯ ದುರವಸ್ಥೆಯಿಂದಾಗಿ ಗ್ರಾಮಕ್ಕೆ ಬಸ್, ಖಾಸಗಿ ಸಾರಿಗೆ ವಾಹನಗಳ ಸಂಚಾರವಿಲ್ಲ. ಹಾಗಾಗಿ ಹೆಚ್ಚಿನವರು ಸಂಚಾರಕ್ಕೆ ದ್ವಿಚಕ್ರ ವಾಹನಗಳನ್ನೇ ನೆಚ್ಚಿಕೊಂಡಿದ್ದಾರೆ.

ADVERTISEMENT

ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮದ ಮೂಲಕ ಗೋವಾದಿಂದ ಬರುವ ಸಾಕಳಿ ನದಿ ಹರಿಯುತ್ತದೆ. ನದಿಗೆ ಸೇತುವೆ ನಿರ್ಮಿಸಿರುವ ಕಾರಣ ಮಳೆಗಾಲದಲ್ಲಿ ಹಳ್ಳ ದಾಟಲು ಸಮಸ್ಯೆ ನಿವಾರಣೆಯಾಗಿದೆ. ಆದರೆ, ಈ ವರ್ಷದ ಮಳೆಗೆ ಸೇತುವೆಯ ಮೇಲೂ ನೀರು ಉಕ್ಕಿ ಹರಿದಿದೆ. ಇದರ ಪರಿಣಾಮವಾಗಿ ಸೇತುವೆಯ ಪಿಚ್ಚಿಂಗ್‌, ಸಂಪರ್ಕಿಸುವ ರಸ್ತೆಗೆ ಹಾನಿಯಾಗಿದೆ.

‘ಗ್ರಾಮದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕವಿದೆ. ಆದರೆ, ತಂತಿಯು ಕಾಡಿನೊಳಗೆ ಸಾಗುವ ಕಾರಣ ಹಾನಿಯಾದ ಸಂದರ್ಭದಲ್ಲಿ ದುರಸ್ತಿ ಮಾಡುವುದು ದೊಡ್ಡ ಸವಾಲಾಗಿದೆ. ಮಳೆ ಮುಗಿಯುತ್ತಲೇ ರಸ್ತೆ ಕಾಮಗಾರಿಯನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ಗ್ರಾಮಸ್ಥ ಮೋಟು ನಾಗೇಕರ್.

ಸಮೀಪದ ಬಾರಗದ್ದೆ, ಕಮರಗಾಂವ್, ಕಾಳ್ನಿ, ಬಿಚೋಲಿ, ಬೋರೆ ಮುಂತಾದ ಗ್ರಾಮಗಳ ರಸ್ತೆಯ ಸ್ಥಿತಿಯೂ ಇದೇ ರೀತಿಯಿದೆ. ‘ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ’ ಅಡಿಯಲ್ಲಿ ಡಾಂಬರು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಈ ವರ್ಷ ಮೇ 24ರಂದು ಕಾಮಗಾರಿಯ ಅವಧಿ ಆರಂಭವಾಗಿದ್ದು, ಮುಂದಿನ ವರ್ಷ ಏ.23ರಂದು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಗಡುವು ವಿಧಿಸಲಾಗಿದೆ.

ಶಿಕ್ಷಕರ ಆಟೊ ಪ್ರಯಾಣ:

ಗೋಯರ್ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿವೆ. ಅವುಗಳ ಶಿಕ್ಷಕರು ನಿತ್ಯವೂ ಆಟೊ ರಿಕ್ಷಾ ಬಾಡಿಗೆಗೆ ಗೊತ್ತುಮಾಡಿಕೊಂಡು ಪ್ರಯಾಣಿಸುತ್ತಾರೆ. ಶಾಲೆಯಲ್ಲಿ ಗ್ರಾಮದ 13 ಮಕ್ಕಳು ಅಧ್ಯಯನ ಮಾಡುತ್ತಿದ್ದು, ಹಿರಿಯ ಪ್ರಾಥಮಿಕ ಶಿಕ್ಷಣಕ್ಕೆ ಗ್ರಾಮದಿಂದ ಹೊರಗೆ ಹೋಗಬೇಕಿದೆ. ಪ್ರೌಢಶಾಲೆಯಿಂದ ನಂತರ ಶಿಕ್ಷಣಕ್ಕಂತೂ ಗ್ರಾಮದಿಂದ ದೂರ ಸಾಗಲೇಬೇಕಾದ ಅನಿವಾರ್ಯ ಸ್ಥಿತಿಯಿದೆ. ಹಾಗಾಗಿ ಮಕ್ಕಳಿಗೆ ವಸತಿ ನಿಲಯ ಅಥವಾ ಪರಿಚಯಸ್ಥರ ಮನೆಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.