ADVERTISEMENT

ಪ್ರಕೃತಿ ಮಡಿಲಲ್ಲಿ ಮಕ್ಕಳಿಗೆ ಜ್ಞಾನಧಾರೆ

ಮೂಲ ಸೌಕರ್ಯವಿರುವ ಮೂಡುಭಟ್ಕಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ರಾಘವೇಂದ್ರ ಭಟ್ಟ
Published 22 ಮಾರ್ಚ್ 2019, 11:18 IST
Last Updated 22 ಮಾರ್ಚ್ 2019, 11:18 IST
ಶಿಸ್ತುಬದ್ಧ ಪ್ರಾರ್ಥನೆಯಲ್ಲಿ ನಿರತವಾಗಿರುವ ಭಟ್ಕಳ ತಾಲ್ಲೂಕಿನ ಮೂಡುಭಟ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.
ಶಿಸ್ತುಬದ್ಧ ಪ್ರಾರ್ಥನೆಯಲ್ಲಿ ನಿರತವಾಗಿರುವ ಭಟ್ಕಳ ತಾಲ್ಲೂಕಿನ ಮೂಡುಭಟ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು.   

ಭಟ್ಕಳ: ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ನೀಡುವ ಸದುದ್ದೇಶದಿಂದ 1955ರಲ್ಲಿ ತಾಲ್ಲೂಕಿನ ಪುಟ್ಟಗ್ರಾಮ ಮೂಡು ಭಟ್ಕಳದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು.ಪ್ರಕೃತಿಯ ಮಡಿಲಿನಲ್ಲಿ, ಪೂರ್ವ ದಿಕ್ಕಿನಲ್ಲಿರುವ ಶಾಲೆಯ ಆರಂಭ ಶಿಕ್ಷಣ ಪ್ರೇಮಿಗಳ ಸಹಕಾರದಿಂದ ಸಾಧ್ಯವಾಯಿತು.

ಆರಂಭದಲ್ಲಿ ಯಾವುದೇ ಸೌಲಭ್ಯಗಳಿಲ್ಲದೇ ಸೊರಗಿದ್ದ ಈ ಶಾಲೆಯು ಇಂದು ದಾನಿಗಳು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಸರ್ಕಾರದ ನೆರವಿನಿಂದ ಕಂಗೊಳಿಸುತ್ತಿದೆ. ಸಕಲ ಮೂಲಸೌಕರ್ಯಗಳನ್ನು ಹೊಂದಿ ಗುಣಮಟ್ಟದ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಪಟ್ಟಣದ ಖಾಸಗಿ ಶಾಲೆಗಳ ಆಕರ್ಷಣೆಯಿಂದಾಗಿ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದರೂಈಶಾಲೆಯಲ್ಲಿ 65 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆ ಗ್ರಾಮಸ್ಥರಿಗೆ ಶಾಲೆಯ ಮೇಲಿನ ಅಭಿಮಾನಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಮನೆಮಕ್ಕಳಂತೆ ನೋಡಿಕೊಳ್ಳುವ ರೀತಿ ಕಾರಣವಾಗಿದೆ. ಗುಣಮಟ್ಟದ ಶಿಕ್ಷಣ, ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕಿ ರಾಜೇಶ್ವರಿ.ಟಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ADVERTISEMENT

ಭಗವದ್ಗೀತೆ ಪಠಣ, ಯೋಗಾಭ್ಯಾಸ:ನಾಲ್ವರೂ ಶಿಕ್ಷಕಿಯರೇ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗೀತಾ ಶಿರೂರ್‌, ಪ್ರತಿಭಾ ಕರ್ಕಿಕರ್, ಶಾರದಾ ಶಾಸ್ತ್ರಿ ‘ನಲಿ ಕಲಿ’ಯಿಂದ ಕೊಠಡಿಗಳ ಕಂಗೊಳಿಸುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯಕ್ಕಾಗಿ ವಾರಕ್ಕೊಮ್ಮೆ ಯೋಗಾಭ್ಯಾಸ, ಧ್ಯಾನ, ಕವಾಯತು, ಭಗವದ್ಗೀತೆ ಪಠಣ ಮಾಡಿಸಲಾಗುತ್ತಿದೆ ಎಂದರು.

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿದ್ದಾರೆ. ಪ್ರತಿವರ್ಷ ನಡೆಯುವ ಕ್ಲಸ್ಟರ್, ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನುಗೆಲ್ಲುತ್ತಿದ್ದಾರೆ.

ದಾನಿಗಳ ನೆರವು:ಶಾಲೆಯ ಮೇಲಿನ ಪ್ರೀತಿಯಿಂದ ಮಾಜಿ ಶಾಸಕ ಜೆ.ಡಿ ನಾಯ್ಕ, ದಕ್ಷಿಣ ಆಫ್ರಿಕಾದಲ್ಲಿರುವಲಚ್ಮಯ್ಯ ಸಿದ್ದನಮನೆಹಾಗೂ ಸ್ಥಳೀಯ ದಾನಿಗಳು ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಸಿಹಿತಿಂಡಿ, ಊಟಕ್ಕೆ ಉಪ್ಪಿನಕಾಯಿ ದಾನವಾಗಿ ನೀಡಲಾಗುತ್ತಿದೆ.

ಶಾಲೆಯಲ್ಲಿ ಪುಸ್ತಕ ಭಂಡಾರ:‘ಶಾಲೆಯಲ್ಲಿ ಪುಸ್ತಕ ಭಂಡಾರ, ವೈಜ್ಞಾನಿಕ ಸಾಮಗ್ರಿ, ಗಣಕಯಂತ್ರ, ಶಾಲೆಯ ಕೊಠಡಿಗಳಿಗೆ ಟೈಲ್ಸ್, ಫ್ಯಾನ್ ಅಳವಡಿಕೆ, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕಗಳಿವೆ.ಪಕ್ಕದಲ್ಲೇಅಂಗನವಾಡಿಯೂ ಇದೆ. ಅಲ್ಲಿನ ಶಿಕ್ಷಕಿ, ಸಹಾಯಕಿ ಸೇರಿದಂತೆ ಎಲ್ಲರೂ ಒಟ್ಟಾಗಿ ಶಾಲೆಯ ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ. ಶಾಲೆಯ ಏಳಿಗೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಕ್ರಪ್ಪ ನಾಯ್ಕ ಹಾಗೂ ಸದಸ್ಯರ ಪಾತ್ರವೂ ಗಣನೀಯವಾಗಿದೆ’ ಎಂದು ರಾಜೇಶ್ವರಿ ಹೇಳಿದರು.

ಮೂಡುಭಟ್ಕಳ ಶಾಲೆ ಮೂಲಸೌಕರ್ಯ ಹೊಂದಿದ್ದರೂ ಶಾಲೆಯ ಆಟದ ಮೈದಾನಕ್ಕೆ ಆವರಣ ಗೋಡೆ ಹಾಗೂ ಗಟಾರದ ಅಗತ್ಯವಿದೆ. ಸುಮಾರು ₹ 5 ಲಕ್ಷ ವೆಚ್ಚ ಬೇಕಾಗಬಹುದು ಎಂದುಶಾಸಕರ ಗಮನಕ್ಕೆ ತರಲಾಗಿದೆ. ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದುಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ವೆಂಕಟೇಶ ದೇವಾಡಿಗ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.