ADVERTISEMENT

ಸ್ವಾತಂತ್ರ್ಯ ಸಂಗ್ರಾಮದ ಕಥೆ ಹೊಂದಿದ ನೆಲ ಸಿದ್ದಾಪುರ: ಶಿವಾನಂದ ಕಳವೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:15 IST
Last Updated 4 ಆಗಸ್ಟ್ 2025, 5:15 IST
ಸಿದ್ದಾಪುರದ ಶಂಕರಮಠದಲ್ಲಿ ಶಿವಾನಂದ ಕಳವೆ ಸ್ವಾತಂತ್ರ್ಯ ಯೋಧರ ವಂಶಸ್ಥರ ಸಂಘಟನೆಗೆ ಭಾನುವಾರ ಚಾಲನೆ ನೀಡಿದರು
ಸಿದ್ದಾಪುರದ ಶಂಕರಮಠದಲ್ಲಿ ಶಿವಾನಂದ ಕಳವೆ ಸ್ವಾತಂತ್ರ್ಯ ಯೋಧರ ವಂಶಸ್ಥರ ಸಂಘಟನೆಗೆ ಭಾನುವಾರ ಚಾಲನೆ ನೀಡಿದರು   

ಸಿದ್ದಾಪುರ: ‘ತಾಲ್ಲೂಕಿನ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ಸ್ವಾತಂತ್ರ್ಯ ಹೋರಾಟದ ಕಥೆ ಕೇಳ ಸಿಗುತ್ತದೆ. ದೇಶದಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆಚ್ಚಿನ ಕೊಡುಗೆ ನೀಡಿದ ತಾಲ್ಲೂಕು ಇದ್ದರೆ ಅದು ನಮ್ಮ ಸಿದ್ದಾಪುರ’ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.

ಪಟ್ಟಣದ ಶಂಕರ ಮಠದಲ್ಲಿ ಭಾನುವಾರ ಸ್ವಾತಂತ್ರ್ಯ ಯೋಧರ ವಂಶಸ್ಥರ ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಬಡತನ ಇದ್ದರೂ ರಾಷ್ಟ್ರೀಯತೆಯ ಭಾವ ಹೆಚ್ಚಿತ್ತು. ದಿನಕ್ಕೆ ಎರಡು ಬಾರಿ ಊಟ ಮಾಡುವವ ಶ್ರೀಮಂತ ಎನ್ನುವ ಕಾಲದಲ್ಲಿ ಮನೆಗೊಬ್ಬರಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇಂದಿನ ರಾಜಕಾರಣಿಗಳಿಗೆ ಪೂರ್ವಜರ ಹೋರಾಟ, ಈ ಮಣ್ಣಿನಲ್ಲಿ ಪಟ್ಟ ಕಷ್ಟದ ಪರಿಚಯವಿಲ್ಲ. ಕಾರಣ ಇಂದು ಹಗರಣಗಳೇ ಹೆಚ್ಚಾಗುತ್ತಿವೆ. ಸಾರ್ವಜನಿಕರು ಜಾಗೃತರಾಗಬೇಕು. ಎಲ್ಲರೂ ಒಟ್ಟಾಗಿ ದೃಢ ಸಂಕಲ್ಪದಿಂದ ಮುಂದುವರಿದರೆ ಸ್ಮೃತಿ ಭವನ ನಿರ್ಮಾಣವಾಗುವ ದಿನ ದೂರವಿಲ್ಲ. ಒಳ್ಳೆಯ ಕೆಲಸಕ್ಕೆ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಸಮಾಜದಲ್ಲಿ ಒಳ್ಳೆಯ ಮನಸ್ಸುಗಳು ಬಹಳಷ್ಟಿವೆ. ಅವರನ್ನು ಒಂದುಗೂಡಿಸುವ ಕೆಲಸವಾಗಬೇಕು’ ಎಂದರು.

ADVERTISEMENT

ಸಾಗರದ ತಹಶೀಲ್ದಾರ್‌ ಚಂದ್ರಶೇಖರ ನಾಯ್ಕ ಹೊಸೂರು ಮಾತನಾಡಿ, ‘ಸಿದ್ದಾಪುರದ ಹಳ್ಳಿ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಹೋರಾಟಗಾರು ಜನಿಸಿ ಸ್ವಾತಂತ್ರ್ಯ ಪಡೆದುಕೊಳ್ಳಲು ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ. ಈಗಿನ ಕಾಲದಲ್ಲಿ ಒಂದಿಂಚು ಭೂಮಿಗಾಗಿ ಅನಾಹುತಗಳೇ ನಡೆಯುತ್ತಿವೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಜಮೀನು, ಮನೆಗಳನ್ನೇ ಕಳೆದುಕೊಂಡವರು ನಮ್ಮ ಪೂರ್ವಜರು. ತ್ಯಾಗ ಬಲಿದಾನಗಳ ಮೂಲಕ ಸ್ವಾತಂತ್ರ್ಯ ದೊರಕಿಸಿಕೊಟ್ಟವರ ನೆನಪು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ಸ್ವಾತಂತ್ರ್ಯ ಸ್ಮೃತಿ ಭವನ ನಿರ್ಮಾಣವಾಗಿ ಮುಂದಿನ ಪೀಳಿಗೆಗೂ ಪೂರ್ವಜರ ನೆನಪು ಉಳಿಯುವಂತೆ ಮಾಡಬೇಕಿದೆ’ ಎಂದರು.

ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ಎಸ್.ವಿ. ಹೆಗಡೆ ಮಗೇಗಾರು, ವಕೀಲ ಜೆ.ಪಿ.ಎನ್. ಹೆಗಡೆ ಹರಗಿ, ಎಸ್. ಹೆಗಡೆ ಬೆಳ್ಳೆಮಡ್ಕೆ, ಗುರುರಾಜ ಶಾನಭಾಗ, ಸೇವಾಸಂಕಲ್ಪ ಟ್ರಸ್ಟ್‌ನ ಪಿ.ಬಿ. ಹೊಸೂರು, ಛಾಯಾಗ್ರಾಹಕ ಶಿರೀಷ ಬೆಟಗೇರಿ ಮಾತನಾಡಿದರು.

ಭಾರತ ಸೇವಾದಳದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಭಟ್ಟ ಕೆಕ್ಕಾರ ಪ್ರಾಸ್ತಾವಿಕ ಮಾತನಾಡಿದರು.

ಎಂ.ಆರ್.ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್. ಹೆಗಡೆ ನೇರ್ಲಮನೆ ಸ್ವಾಗತಿಸಿದರು. ಸತ್ಯನಾರಾಯಣ ನಾಯ್ಕ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.