ಶಿರಸಿ: ‘ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಂಡ ದಶಲಕ್ಷ ಗಿಡ ನೆಡುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಮಹಿಳಾ ಅರಣ್ಯವಾಸಿಗಳು ದಾಖಲೆ ಸಂಖ್ಯೆಯಲ್ಲಿ ಗಿಡ ನೆಡುವ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಜಿಲ್ಲೆಯಾದ್ಯಂತ ಜೂನ್ 21ರಂದು 500ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಏಕಕಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.
‘ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವ ಅರಣ್ಯವಾಸಿ ಕುಟುಂಬಗಳಲ್ಲಿ ಮಹಿಳೆಯರು ಅರಣ್ಯ ಭೂಮಿ ಸಾಗುವಳಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಸಹಜ. ಜಿಲ್ಲೆಯಾದ್ಯಂತ ಕಳೆದ 33 ವರ್ಷದಿಂದ ಜರುಗುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟದಲ್ಲಿಯೂ ಭೂಮಿ ಹಕ್ಕಿಗಾಗಿ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿ ಧುಮುಕುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ದಶಲಕ್ಷ ಗಿಡ ನೆಡುವ ಅಭಿಯಾನವು ಜುಲೈ 5ರವರೆಗೂ ಜಿಲ್ಲೆಯಾದ್ಯಂತ ನಡೆಯಲಿದೆ. ಪ್ರತಿ ಅರಣ್ಯವಾಸಿ ಕುಟುಂಬವು ಕನಿಷ್ಠ ಹತ್ತು ಗಿಡಗಳನ್ನ ನಡುವಂತೆ ಸಂದೇಶ ನೀಡಲಾಗಿದೆರವೀಂದ್ರ ನಾಯ್ಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.