ಶಿರಸಿ: ಮಾರುಕಟ್ಟೆಯಲ್ಲಿ ಸಿಗುವ ಕರಿದ ತಿನಿಸುಗಳು ತಿನ್ನುವವನ ಜೀವನವನ್ನು ಬೇಗ ಮುಗಿಸುತ್ತವೆ ಎಂದು ನಿಸರ್ಗಮನೆ ವೈದ್ಯ ಡಾ.ಪ್ರವೀಣ ಜೆಕಬ್ ಹೇಳಿದರು.
ಇಲ್ಲಿನ ಇಸಳೂರಿನಲ್ಲಿರುವ ಶ್ರೀನಿಕೇತನ ಶಾಲೆಯಲ್ಲಿ ಶನಿವಾರ ಪೋಷಣ ಮಾಸಾಚರಣೆ ಪ್ರಯುಕ್ತ 4ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ–ಜಂಕ್ ಫುಡ್ ವಿಷಯದ ಕುರಿತು ಆಯೋಜಿಸಿದ್ದ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಾಯಿ ಚಪಲಕ್ಕೆ ಕರಿದ ತಿನಿಸುಗಳನ್ನು ತಿನ್ನಬೇಡಿ. ಹಣ್ಣು, ಹಸಿ ತರಕಾರಿ, ಮೊಳಕೆ ಕಾಳು ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು. ಜೊತೆಗೆ ಮಕ್ಕಳಿಗೆ ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರಗಳ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ತಮ್ಮ ಸಾಕ್ಷ್ಯಚಿತ್ರಗಳ ಮೂಲಕ ತಿಳಿಸಿಕೊಟ್ಟರು.
ವನಸ್ತ್ರೀ ಮಾತೃ ಮಂಡಳಿಯ ವಿದ್ಯಾ ಭಟ್ ಅವರು ಸಂಗ್ರಹಿಸಿದ 350ಕ್ಕೂ ಹೆಚ್ಚು ಧಾನ್ಯಗಳನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು.
8ರಿಂದ 10ನೇ ವಿದ್ಯಾರ್ಥಿಗಳಿಗೆ ‘ಕುಕಿಂಗ್ ವಿದೌಟ್ ಫೈಯರ್’ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ನಿರ್ಣಾಯಕ ಶಿಕ್ಷಕರು ವಿವಿಧ ಫ್ರೂಟ್ ಮತ್ತು ವೆಜಿಟೇಬಲ್ ಸಲಾಡ್‌ಗಳನ್ನು ಸವಿದು ಸಂತಸಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀನಿಕೇತನ ಶಾಲೆಯ ಪ್ರಾಂಶುಪಾಲ ವಸಂತ ಭಟ್ ಹಾಗೂ ಉಪಪ್ರಾಚಾರ್ಯೆ ವಸುಧಾ ಹೆಗಡೆ ಉಪಸ್ಥಿತರಿದ್ದು, ಮಕ್ಕಳಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.