ADVERTISEMENT

ದಾಂಡೇಲಿ: ರಾಜ್ಯದ ಮೊದಲ ಮೊಸಳೆ ಉದ್ಯಾನ ಉದ್ಘಾಟನೆ

₹ 3 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 14:36 IST
Last Updated 30 ಜನವರಿ 2022, 14:36 IST
ದಾಂಡೇಲಿಯ ಮೊಸಳೆ ಉದ್ಯಾನದಲ್ಲಿ ಮೊಸಳೆಗಳು ವಿಹರಿಸುತ್ತಿರುವುದು
ದಾಂಡೇಲಿಯ ಮೊಸಳೆ ಉದ್ಯಾನದಲ್ಲಿ ಮೊಸಳೆಗಳು ವಿಹರಿಸುತ್ತಿರುವುದು   

ದಾಂಡೇಲಿ: ‘ಪ್ರವಾಸೋದ್ಯಮದ ಅಭಿವೃದ್ಧಿಯಿಂದ ಸ್ಥಳೀಯರಿಗೆ ಉದ್ಯೋಗ ದೊರೆತು ನೆಮ್ಮದಿಯ ಬದುಕು ನಡೆಸಿದಾಗ ಕೆಲಸ ಸಾರ್ಥಕವಾಗುತ್ತದೆ. ದಾಂಡೇಲಿ– ಹಳಿಯಾಳ ಭಾಗದ ದಟ್ಟ ಕಾಡು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ’ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿಮ ಹಾಲಮಡ್ಡಿಯ ದಾಂಡೇಲಪ್ಪ ದೇವಸ್ಥಾನದ ಹತ್ತಿರ ಪ್ರವಾಸೋದ್ಯಮ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮೊಸಳೆ ಉದ್ಯಾನ ಅನ್ನು ಭಾನುವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಇದು ರಾಜ್ಯದ ಮೊದಲ ಮತ್ತು ದೇಶದ ಎರಡನೇ ಮೊಸಳೆ ಉದ್ಯಾನವಾಗಿದೆ.

‘ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ರಸ್ತೆ, ಸೇತುವೆ, ಹೋಟೆಲ್, ರೆಸಾರ್ಟ್ ನಿರ್ಮಾಣ ಮಾತ್ರವಲ್ಲ. ಆ ಭಾಗದ ಜನರ ಮೂಲಸೌಕರ್ಯಗಳ ಅಭಿವೃದ್ಧಿಯೂ ಆಗಿದೆ. ಒಂದು ಕೈಗಾರಿಕೆಯಿಂದ ಸೀಮಿತ ಅಭಿವೃದ್ಧಿ ಸಾಧ್ಯವಾದರೆ ಪ್ರವಾಸೋದ್ಯಮದಿಂದ ಎಲ್ಲ ವರ್ಗ ಜನರಿಗೆ ಉದ್ಯೋಗ ಸಿಗುತ್ತದೆ’ ಎಂದರು.

ADVERTISEMENT

ಮೊಸಳೆ ಉದ್ಯಾನದ ಸುತ್ತಲೂ ಸಾಮಾನ್ಯ ಜನರಿಗೆ ಅಂಗಡಿ ವ್ಯವಹಾರ ನಡೆಸಲು ಅವಕಾಶ ನೀಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು. ಉದ್ಯಾನದ ಸೂಕ್ತ ನಿರ್ವಹಣೆಯ ಜೊತೆಗೆ ಜನಪ್ರಿಯಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜಯಂತ.ಎಚ್.ವಿ ಮಾತನಾಡಿ, ‘ಹಳಿಯಾಳ– ಜೊಯಿಡಾ ಭಾಗದಲ್ಲಿ ಇರುವ ಸ್ಥಳಗಳ ಅಭಿವೃದ್ಧಿಯಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಇದೆ. ಕಾಳಿ ನದಿಯಲ್ಲಿ ದಡದಲ್ಲಿ ಇರುವ ಮೊಸಳೆಗಳ ಆವಾಸ ಸ್ಥಾನವು ಜನಾಕರ್ಷಿಸಲಿದೆ’ ಎಂದರು.

ಪಾರ್ಕ್ ನ ಆವರಣದಲ್ಲಿ ಇರುವ ಮೊಸಳೆಯ ಬೃಹತ್ ಪ್ರತಿಮೆ ಮತ್ತು ಮಕ್ಕಳ ಆಟಿಕೆಗಳು.

ಉದ್ಯಾನದಲ್ಲಿ ಏನೇನಿದೆ?:

ಉದ್ಯಾನದ ಆರಂಭದಲ್ಲಿ ಹಸಿರು ಹುಲ್ಲಿನ ಹಾಸು, ಮೊಸಳೆಯ ಬೃಹತ್ ಪ್ರತಿಮೆ, ಜಿಂಕೆ, ಜಿರಾಫೆಗಳನ್ನೇ ಹೋಲುವ ಪ್ರಾಣಿಗಳ ಪ್ರತಿಕೃತಿಗಳು, ಪ್ಯಾರಾಗೋಲಾ, ಕಾರಂಜಿ, ಭದ್ರತಾ ಹಾಗೂ ಟಿಕೆಟ್ ಕೌಂಟರ್, ಆವರಣ ಗೋಡೆ, ವಾಹನ ನಿಲುಗಡೆ ವ್ಯವಸ್ಥೆಯಿದೆ.

ಇವುಗಳನ್ನು ದಾಟಿ ಹೋದರೆ ಕಾಳಿ ನದಿಯ ದಂಡೆಯ ಮೇಲೆ ನಿರ್ಮಿಸಲಾದ ವೀಕ್ಷಣಾ ಗೋಪುರಗಳಲ್ಲಿ ನಿಂತು ದಂಡೆಯ ಆಚೆ ಇರುವ ಮೊಸಳೆಗಳನ್ನು ಸುರಕ್ಷಿತವಾಗಿ ನೋಡಬಹುದು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕ, ಆಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷಣ ಜಾಧವ, ಉಪಾಧ್ಯಕ್ಷ ನೂರ್ ಜಹಾರ ನದಾಫ, ಅಂಬೇವಾಡಿ ಗ್ರಾಮ ಪಂಚಾಯಿತಿ ಸದಸ್ಯ ಜಿ.ಪ್ರಕಾಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್.ಹೆಗಡೆ, ತಹಸೀಲ್ದಾರ ಶೈಲೇಶ ಪರಮಾನಂದ, ನಗರಸಭೆ ಆಯುಕ್ತ ರಾಜಾರಾಂ ಪವಾರ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್.ಹಂಚಿನಮನಿ, ದೇವಾನಂದ ಅಮರಗೋಳಕರ ಹಾಗೂ ನಗರಸಭೆ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.