ADVERTISEMENT

ಕುಮಟಾ: ಜಲಾವೃತವಾಗುವ ರಾಷ್ಟ್ರೀಯ ಹೆದ್ದಾರಿಗೆ ತಾತ್ಕಾಲಿಕ ಗಟಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2023, 15:46 IST
Last Updated 10 ಜೂನ್ 2023, 15:46 IST
ಮಳೆಗಾಲದಲ್ಲಿ ಜಲಾವೃತಗೊಳ್ಳುವ ಕುಮಟಾ ತಾಲ್ಲೂಕಿನ ಅಳ್ವೆಕೋಡಿ ರಾಷ್ಟ್ರೀಯ ಹೆದ್ದಾರಿ–66ರ ಅಲ್ಲಲ್ಲಿ ಶನಿವಾರ ಗಟಾರ ನಿರ್ಮಾಣ ಕಾರ್ಯ ನಡೆಯಿತು
ಮಳೆಗಾಲದಲ್ಲಿ ಜಲಾವೃತಗೊಳ್ಳುವ ಕುಮಟಾ ತಾಲ್ಲೂಕಿನ ಅಳ್ವೆಕೋಡಿ ರಾಷ್ಟ್ರೀಯ ಹೆದ್ದಾರಿ–66ರ ಅಲ್ಲಲ್ಲಿ ಶನಿವಾರ ಗಟಾರ ನಿರ್ಮಾಣ ಕಾರ್ಯ ನಡೆಯಿತು   

ಕುಮಟಾ: ತಾಲ್ಲೂಕಿನ ಅಳ್ವೆಕೋಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ಧ ಕಿ.ಮೀ. ಉದ್ದಕ್ಕೆ ಮಳೆ ನೀರು ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಜಾಗದಲ್ಲಿ ಐ.ಆರ್.ಬಿ ಕಂಪನಿ ಸಿಬ್ಬಂದಿ ಶನಿವಾರ ತಾತ್ಕಾಲಿಕ ಗಟಾರ ನಿರ್ಮಾಣ ಮಾಡಿದರು.

ಕಳೆದ ಐದಾರು ವರ್ಷಗಳಿಂದ ಜೋರು ಮಳೆ ಬೀಳುವಾಗ ಅಳ್ವೆಕೋಡಿ ಭಾಗದ ಹೆದ್ದಾರಿ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಗುವುದಲ್ಲದೆ, ಅಪಫಾತಗಳೂ ಸಂಭವಿಸಿವೆ.

‘ಐಆರ್‌ಬಿ ಕಂಪನಿಯವರು ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡುವಾಗ ಒಂದು ಬದಿ ಮಾತ್ರ ಗಟಾರ ಕಾಮಗಾರಿ ಮಾಡಿದ್ದಾರೆ. ಆದರೆ ಅದಕ್ಕೆ ಮಳೆ ನೀರು ಹರಿದು ಹೋಗುವಂತೆ ಸಂಪರ್ಕ ಕಲ್ಪಿಸಿಲ್ಲ. ಮಳೆ ಬಿದ್ದಾರ ತಗ್ಗು ಪ್ರದೇಶದಲ್ಲಿ ಹೆದ್ದಾರಿ ಮೇಲೆ ನೀರು ತುಂಬಿಕೊಂಡು ಅಪಘಾತ ಸಂಭವಿಸುತ್ತಿದೆ’ ಎಂದು ಸ್ಥಳೀಯರಾದ ವಿನಾಯಕ ನಾಯ್ಕ ಮಾಹಿತಿ ನೀಡಿದರು.

ADVERTISEMENT

‘ಇಲ್ಲಿ ಚತುಷ್ಪಥ ಹೆದ್ದಾರಿಯನ್ನು ಟೋಲ್ ಹಣ ಸಂಗ್ರಹಿಸುವ ಉದ್ದೇಶದಿಂದ ಮಾತ್ರ ನಿರ್ಮಾಣ ಮಾಡುತ್ತಿರುವಂತಿದೆ. ನಾಲ್ಕು ವರ್ಷಗಳಿಂದ ಅಳ್ವೆಕೋಡಿಯಲ್ಲಿ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಇದರಿಂದ ಸ್ಥಳೀಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರ ತಲೆ ಕೆಡಿಸಿಕೊಂಡತಿಲ್ಲ’ ಎಂದು ಉದ್ಯಮಿ ಅರವಿಂದ ಪೈ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಡಿ. ಪ್ರಜ್ಞಾ, ‘ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅಪೂರ್ಣವಾದ ಹೆದ್ದಾರಿ ಕಾಮಗಾರಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಎರಡೂ ಬದಿ ಗಟಾರ, ಹೆದ್ದಾರಿ ವಿಸ್ತರಣೆ ಕಾಮಗಾರಿ ವೈಜ್ಞಾನಿಕ ರೀತಿಯಲ್ಲಿ ನಡೆದರೆ ಈ ಸಮಸ್ಯೆ ಇರುವುದಿಲ್ಲ’ ಎಂದರು.

ಐ.ಆರ್.ಬಿ ಕಂಪನಿ ಹಿರಿಯ ಎಂಜಿನಿಯರ್ ಮಲ್ಲಿಕಾರ್ಜನ್ ಅವರು ಪ್ರತಿಕ್ರ್ರಿಯಿಸಿ, ‘ಮಳೆ ನೀರು ನಿಲ್ಲುವ ಹೆದ್ದಾರಿ ಬದಿ ನೆಲದಡಿ ಕುಮಟಾ-ಹೊನ್ನಾವರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮರಾಕಲ್ ಯೋಜನೆಯ ಪೈಪ್ ಲೈನ್ ಇದೆ. ಅದನ್ನು ಸ್ಥಳಾಂತರಿಸಲು ಹೆದ್ದಾರಿ ಪ್ರಾಧಿಕಾರ ಇನ್ನೂ ಅನುಮತಿ ನೀಡಿಲ್ಲ. ಸ್ಥಳಾಂತರದ ನಂತರ ಗಟಾರ, ನಂತರ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯಲಿದೆ. ಅಲ್ಲಿಯವರೆಗೆ ಹೆದ್ದಾರಿಯಲ್ಲಿ ನಿಲ್ಲುವ ಮಳೆ ನೀರು ಹರಿದು ಹೋಗಲು ಆಗಾಗ ತಾತ್ಕಾಲಿಕ ಗಟಾರ ನಿರ್ಮಿಸಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.