ಶಿರಸಿಯ ಅರಣ್ಯ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ’ ವಿಷಯದ ಕುರಿತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮಾತನಾಡಿದರು.
ಕಾರವಾರ/ಶಿರಸಿ: ದೇಶದ 14ನೇ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ಶಿರಸಿ ಅರಣ್ಯ ಕಾಲೇಜು ಭೇಟಿ ನೂರಾರು ಅರಣ್ಯ ಪದವಿ ವಿದ್ಯಾರ್ಥಿಗಳಲ್ಲಿ ಪುಳಕ ಹುಟ್ಟಿಸಿತು.
ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಅರಣ್ಯ ಕಾಲೇಜಿನ ಆವರಣದಲ್ಲಿ ‘ದೇಶ ಕಟ್ಟುವಿಕೆಯಲ್ಲಿ ಅರಣ್ಯ ವಿಜ್ಞಾನದ ಪಾತ್ರ’ ವಿಷಯದ ಕುರಿತಾಗಿ ಅರಣ್ಯ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳೊಡನೆ ಸಂವಾದ ನಡೆಸಲು ಅವರ ಭೇಟಿ ನಿಗದಿಯಾಗಿತ್ತು. ನಿಗದಿಗಿಂತ 10 ನಿಮಿಷ ಮುಂಚಿತವಾಗಿಯೇ ಸ್ಥಳಕ್ಕೆ ಬಂದ ಅವರು ಕಾರಿನಿಂದ ಇಳಿಯುತ್ತಲೇ ವಿದ್ಯಾರ್ಥಿಗಳತ್ತ ಕೈಬೀಸಿದರು. ಆಗ ವಿದ್ಯಾರ್ಥಿಗಳ ಉದ್ಘಾರ ಮುಗಿಲುಮುಟ್ಟಿತ್ತು.
ವೇದಿಕೆ ಏರಿದ ಐದು ನಿಮಿಷದಲ್ಲಿಯೇ ಭಾಷಣ ಆರಂಭಿಸಿದ ಅವರು ಮಾತಿನುದ್ದಕ್ಕೂ ವಿದ್ಯಾರ್ಥಿಗಳನ್ನು ಉದ್ದೇಶಿಸುತ್ತ ಅವರನ್ನು ಪುಳಕಗೊಳ್ಳುವಂತೆ ಮಾಡಿದರು.
‘ಸಸಿ ನಾಟಿ ಮಾಡುವುದೇ ಅರಣ್ಯ ರಕ್ಷಣೆಯಲ್ಲ. ಸಸ್ಯ ಸಂಪತ್ತು, ಜೀವಿಗಳ ಉಳಿವು, ಗಾಳಿ, ನೀರಿನ ಸಂರಕ್ಷಣೆ ಪರಿಸರದ ಉಳಿವಿನ ಭಾಗ. ಗಾಳಿ, ನೀರು ಮನುಷ್ಯನ ಆರೋಗ್ಯಯುತ ಜೀವನಕ್ಕೆ ಅಗತ್ಯ. ಈ ಕಾರಣದಿಂದಲೇ ಪೂರ್ವಜರು ನೀರು ಮತ್ತು ಗಾಳಿಯನ್ನು ದೇವರಂತೆ ಪೂಜಿಸಿದ್ದರು’ ಎಂದು ವೇದಿಕೆಯ ಎದುರಿನಲ್ಲಿದ್ದ ಅರಣ್ಯಾಧಿಕಾರಿಗಳನ್ನು ಎಚ್ಚರಿಸಿದರು.
‘ಪ್ರಕೃತಿ ಸಂಪತ್ತನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಯೋಧರಾಗಬೇಕು. ಆರೋಗ್ಯಯುತ ಪರಿಸರ ಮತ್ತು ಯುವ ಜನ ದೇಶವಷ್ಟೆ ಅಲ್ಲದೇ, ಜಗತ್ತಿನ ಉಜ್ವಲ ಭವಿಷ್ಯಕ್ಕೆ ಅಗತ್ಯವಿದೆ. ಪ್ರಕೃತಿ ಕೇವಲ ಮಾನವನಿಗೆ ಸೀಮಿತವಾಗಿಲ್ಲ ಎಂಬ ಸತ್ಯವನ್ನು ಅರಿತುಕೊಳ್ಳಿ. ಪ್ರಾಣಿ– ಪಕ್ಷಿಗಳಿಗೂ ಅದು ಮೀಸಲಾಗಿದೆ. ಈಗಿನ ಪೀಳಿಗೆ ಈ ಸತ್ಯದೊಂದಿಗೆ ಅಧ್ಯಯನ ನಡೆಸುತ್ತ, ಮುಂದಿನ ಪೀಳಿಗೆಗೂ ಅರಿವು ಮೂಡಿಸುವ ಜವಾಬ್ದಾರಿ ನಿಭಾಯಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
‘ಅರಣ್ಯ ಶ್ವಾಸಕೋಶದಂತೆ. ಶ್ವಾಸಕೋಶ ಸರಿಯಾಗಿದ್ದರೆ ಉಸಿರಾಡಬಹುದು. ವಾತಾವರಣದ ಏರುಪೇರು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ. ಈ ಸವಾಲು ಎದುರಿಸಲು ಪರಿಸರ ಉಳಿಸಬೇಕು. ಮನುಷ್ಯನ ಅತಿಯಾಸೆಗೆ ಪರಿಸರ ನಾಶವಾಗುತ್ತಿದ್ದರೆ ಭೂಮಿ ತಾಯಿ ಕ್ಷಮೆ ನೀಡಲಾರಳು’ ಎಂದು ಎಚ್ಚರಿಸಿದರು.
‘ಭಾರತವು ಸಾಂಸ್ಕೃತಿಕವಾಗಿ ಸಿರಿವಂತವಾಗಿದೆ. ಪ್ರಾಚೀನ ಕಾಲದಿಂದಲೂ ಈ ನೆಲದಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಗಿತ್ತು. ಪರಿಸರದೊಂದಿಗೆ ಬದುಕುವ ಕಲೆಯನ್ನು ಪೂರ್ವಜರು ಕರಗತ ಮಾಡಿಕೊಂಡಿದ್ದರು’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಭೀಮಣ್ಣ ನಾಯ್ಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಪಿ.ಎಲ್.ಪಾಟೀಲ ಇದ್ದರು.
ಅರಣ್ಯ ಕಾಲೇಜಿನ ಡೀನ್ ಆರ್.ವಾಸುದೇವ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಶಿರಸಿಯ ಪರಿಸರ ಹೊಗಳಿಕೆ
‘ಶಿರಸಿಯ ಪರಿಸರ ಅದ್ಭುತವಾಗಿದೆ. ಪಶ್ಚಿಮ ಘಟ್ಟ ಪ್ರದೇಶವು ಇಡೀ ಜಗತ್ತಿನಲ್ಲೇ ಅದ್ಭುತ ತಾಣವಾಗಿದೆ. ಇಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳ ಕಲಿಕೆ ತರಗತಿಯ ಕೊಠಡಿಗೆ ಸೀಮಿತವಾಗದು. ಇಡೀ ಪ್ರಕೃತಿಯುದ್ದಕ್ಕೂ ಓಡಾಡುತ್ತ ಕಲಿಯಲು ಅವಕಾಶವಿದೆ. ಏಲಕ್ಕಿ ದಾಲ್ಚಿನ್ನಿ ಕಾಳುಮೆಣಸು ಸೇರಿದಂತೆ ಅನೇಕ ಮಸಾಲೆ ಉತ್ಪನ್ನ ಬೆಳೆಯುವ ಫಲವತ್ತಾದ ಭೂಮಿ ಇದಾಗಿದೆ. ಇಲ್ಲಿನ ಜನರು ಪರಿಸರದೊಂದಿಗೆ ಬದುಕುತ್ತಿದ್ದಾರೆ’ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಶಿರಸಿಯ ಪ್ರಾಕೃತಿಕ ಸೊಬಗು ಬಣ್ಣಿಸಿದರು.
ತಾಯಿ ನೆನಪಿನಲ್ಲಿ ಸಸಿ ನಾಟಿ
ಅರಣ್ಯ ಕಾಲೇಜಿನ ಆವರಣದಲ್ಲಿ ಜಗದೀಪ್ ಧನಕರ್ ಅವರು ತಮ್ಮ ತಾಯಿ ಕೇಸರಿ ದೇವಿ ಹೆಸರಿನಲ್ಲಿ ಅವರ ಪತ್ನಿ ಸುದೇಶಾ ಧನಕರ್ ಅವರು ತಮ್ಮ ತಾಯಿ ಭಗವತಿ ದೇವಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ತಮ್ಮ ತಾಯಿ ಸುಮನ್ ಬಾಯಿ ಹೆಸರಿನಲ್ಲಿ ಅಶೋಕ ವೃಕ್ಷ ನೆಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.