ಕಾರವಾರ: ‘ಸಾಕಷ್ಟು ಮುಂಚಿತವಾಗಿ ಸೂಚನೆ ನೀಡದೇ ಕದ್ರಾ ಜಲಾಶಯದಿಂದ ಕಾಳಿ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗಿದೆ. ಆಸ್ತಿಪಾಸ್ತಿ ಹಾನಿಯಾಗಲು ಇದೇ ಕಾರಣ. ನೆರೆ ಇಳಿದ ಬಳಿಕ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲನೆಗೆ ಬಂದಿಲ್ಲ’ ಎಂದು ನೆರೆ ಪೀಡಿತ ಪ್ರದೇಶಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮೊಣಕಾಲು ಮಟ್ಟದಲ್ಲಿದ್ದ ನೀರು 15 ನಿಮಿಷಗಳಲ್ಲಿ ಕುತ್ತಿಗೆಯವರೆಗೆ ಬಂದಿದೆ. ಜಲಾಶಯದಿಂದ ನೀರು ಹೊರ ಬಿಡುವುದಾಗಿ ಕರ್ನಾಟಕ ವಿದ್ಯುತ್ ನಿಗಮದಿಂದ ಆರಂಭದಲ್ಲಿ ಮಾತ್ರ ಪ್ರಕಟಣೆ ಬಂತು. ಆದರೆ, ನೀರಿನ ಪ್ರಮಾಣವನ್ನು ಇಷ್ಟೊಂದು ಏರಿಕೆ ಮಾಡುವುದಾಗಿ ಹೇಳಿರಲಿಲ್ಲ. ಆಗ ನಮ್ಮ ಬಳಿ ಅಗತ್ಯ ಸುರಕ್ಷತಾ ಸಲಕರಣೆಗಳೂ ಇರಲಿಲ್ಲ’ ಎಂದು ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತನುಜಾ ರಂಗಸ್ವಾಮಿ ಹೇಳಿದರು.
‘ಸಂಭಾವ್ಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ಸಂಬಂಧ ಒಂದು ತಿಂಗಳ ಹಿಂದೆ ಉಪ ವಿಭಾಗಾಧಿಕಾರಿ ಮತ್ತು ವಿವಿಧ ಅಧಿಕಾರಿಗಳು ಸಭೆ ನಡೆಸಿದ್ದರು. ಅಗತ್ಯವಿರುವ ಸಲಕರಣೆಗಳ ಮಾಹಿತಿಯನ್ನು ನೀಡಿದ್ದೆವು. 19 ದೋಣಿಗಳ ಅಗತ್ಯವಿರುವುದನ್ನು ತಿಳಿಸಿದ್ದೆವು. ಆದರೆ, ಪ್ರವಾಹ ಉಂಟಾದಾಗ ತುರ್ತು ರಕ್ಷಣೆಗೆ ಅವು ಸಿಗಲೇ ಇಲ್ಲ’ ಎಂದು ಅಸಮಾಧಾನ ಹೊರಹಾಕಿದರು.
‘ಬೆಳಿಗ್ಗೆ 7ಕ್ಕೆ ನೆರೆ ಉಂಟಾಗಿತ್ತು. ಆದರೆ, ಮಧ್ಯಾಹ್ನ 3 ಗಂಟೆಯಾದರೂ ದೋಣಿಗಳು ತಲುಪಲಿಲ್ಲ. ಇದರಿಂದ ಜನರು ಬಹಳ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದರು. ಈಗಿನ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವುದು ಉತ್ತಮ’ ಎಂದು ಆಗ್ರಹಿಸಿದರು.
‘ಗ್ರಾಮ ಪಂಚಾಯಿತಿಯು ವಿಸ್ತಾರವಾಗಿದ್ದು, ನೋಡಲ್ ಅಧಿಕಾರಿಯೊಬ್ಬರಿಂದ ನಿರ್ವಹಣೆ ಕಷ್ಟಸಾಧ್ಯ. ನಾವು ಜನರಿಗೆ ಉತ್ತರಿಸೋದಾ ಅಧಿಕಾರಿಗಳ ಬಳಿ ಸೌಕರ್ಯ ಬೇಕು ಎಂದು ಕೇಳೋದಾ? ಜನ ಈಗಾಗಲೇ ಪಂಚಾಯಿತಿ ಬಳಿ ಬಂದು ಗಲಾಟೆ ಮಾಡ್ತಿದ್ದಾರೆ. ನಾವು ಏನೂಂತ ಉತ್ತರಿಸೋದಕ್ಕೆ ಸಾಧ್ಯ’ ಎಂದು ಪ್ರಶ್ನಿಸಿದರು.
ಕದ್ರಾ ಕೆ.ಪಿ.ಸಿ ಲೇಬರ್ ಕಾಲೊನಿಯ ನಿವಾಸಿ ರಂಗಾ ವಿಜಯನ್ ಕೂಡ ಇದೇ ರೀತಿ ಆರೋಪಿಸಿದರು. ‘ಈ ಬಾರಿ ಜಲಾಶಯದಿಂದ ನದಿಗೆ ಹಗಲು ನೀರು ಹರಿಸಲಾಯಿತು. ಪ್ರತಿ ಬಾರಿ ನೀರು ಬಿಡುವಾಗಲೂ ಪೊಲೀಸರು ಧ್ವನಿವರ್ಧಕದಲ್ಲಿ ಘೋಷಿಸುತ್ತ ಹೋಗುತ್ತಿದ್ದರು. ನಾವು ಸ್ವಲ್ಪ ಬಟ್ಟೆಬರೆಯನ್ನಾದರೂ ತೆಗೆದುಕೊಂಡು ಸುರಕ್ಷಿತವಾಗಿ ಇರುತ್ತಿದ್ದೆವು. ಈ ಸಲ ಅದನ್ನೂ ಮಾಡಲಿಲ್ಲ. ಏನೂ ಹೇಳದಂತೆ ನೀರು ಹರಿಸಿದರು. ನಾವು ಮಾತಾಡ್ತಿದ್ದಂತೆ ಮುಳುಗುವಷ್ಟು ನೀರು ತುಂಬಿಹೋಯ್ತು’ ಎಂದು ದೂರಿದರು.
ಮರಳು, ಹೂಳು ತೆರವಿಗೆ ಒತ್ತಾಯ:
ಕಾಳಿ ನದಿಯಲ್ಲಿ ಹಲವು ವರ್ಷಗಳಿಂದ ಮರಳು, ಹೂಳು ತೆರವು ಮಾಡಿಲ್ಲ. ಅಲ್ಲದೇ ಸುತ್ತಮುತ್ತಲಿನ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂದೂ ಸ್ಥಳೀಯರು ದೂರಿದ್ದಾರೆ. 20–30 ವರ್ಷಗಳ ಹಿಂದೆ ಇದಕ್ಕಿಂತ ಹೆಚ್ಚು ಮಳೆ ಬರುತ್ತಿತ್ತು. ಆಗಲೂ ಈ ಪ್ರಮಾಣದಲ್ಲಿ ಪ್ರವಾಹವಾಗಿರಲಿಲ್ಲ. ಮೂರು ವರ್ಷಗಳಿಂದ ಪ್ರತಿ ಮಳೆಗಾಲದಲ್ಲೂ ನೆರೆ ಪರಿಸ್ಥಿತಿ ತಲೆದೋರುತ್ತಿದೆ ಎಂದು ಹೇಳಿದ್ದಾರೆ.
‘ಪ್ರಭಾವ’ಕ್ಕೆ ಅವಕಾಶ:
ಕದ್ರಾ ಮತ್ತು ಮಲ್ಲಾಪುರ ಸಂಪರ್ಕಿಸಲು ಜಲಾಶಯದ ಕೆಳಭಾಗದಲ್ಲಿ ನಿರ್ಮಿಸಲಾಗಿರುವ ಸೇತುವೆಯು ನೀರಿನಲ್ಲಿ ಮುಳುಗಡೆಯಾಗಿದೆ. ಹಾಗಾಗಿ ಸಾರ್ವಜನಿಕರ ವಾಹನಗಳಿಗೆ ಜಲಾಶಯದ ಮೇಲೆ ಸಂಚರಿಸಲು ಅವಕಾಶ ನೀಡಲಾಗಿದೆ. ಇಲ್ಲಿ ವಾಹನಗಳನ್ನು ನಿಲ್ಲಿಸಿ ಜಲಾಶಯದಿಂದ ನೀರು ಹೊರ ಹೋಗುವುದನ್ನು ವೀಕ್ಷಿಸಲು ಮುಕ್ತ ಅವಕಾಶ ಇಲ್ಲ.
ಆದರೆ, ಪ್ರಭಾವಿಗಳು, ಪರಿಚಯದವರಿಗೆ ಭದ್ರತಾ ಸಿಬ್ಬಂದಿ ತಾಸುಗಟ್ಟಲೆ ನಿಂತು ವೀಕ್ಷಿಸಲು ಅವಕಾಶ ನೀಡುತ್ತಿದ್ದಾರೆ. ಈ ಬಗ್ಗೆ ಭಾನುವಾರ ಮಧ್ಯಾಹ್ನ ಪ್ರಶ್ನಿಸಿದ ಕೆಲವರೊಂದಿಗೆ ಭದ್ರತಾ ಸಿಬ್ಬಂದಿ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
––––
ಪ್ರವಾಹದಿಂದ ಹಾನಿ (ಜುಲೈ 25ರಂತೆ)
ನೆರೆ ಪೀಡಿತ ಗ್ರಾಮಗಳು;114
ಬಾಧಿತ ಜನಸಂಖ್ಯೆ;18,421
ಮೃತರು;6
ನಾಪತ್ತೆಯಾದವರು;1
ಜಾನುವಾರು ಸಾವು;59
ಸಂಪೂರ್ಣ ಮನೆ ಕುಸಿತ;69
ಭಾಗಶಃ ಮನೆ ಕುಸಿತ;313
ಸಕ್ರಿಯ ಕಾಳಜಿ ಕೇಂದ್ರಗಳು;136
ಆಶ್ರಯ ಪಡೆದಿರುವವರು;15,952
*******
ಕೃಷಿ, ಸ್ವತ್ತು ಹಾನಿ
ಕೃಷಿ ಜಮೀನು;595 ಹೆಕ್ಟೇರ್
ತೋಟಗಾರಿಕೆ ಜಮೀನು;417 ಹೆಕ್ಟೇರ್
ರಸ್ತೆಗೆ ಹಾನಿ;226.53 ಕಿ.ಮೀ
ಸೇತುವೆಗಳು;39
ಶಾಲಾ ಕಟ್ಟಡಗಳು;18
ಪ್ರಾಥಮಿಕ ಆರೋಗ್ಯ ಕೇಂದ್ರ;1
ವಿದ್ಯುತ್ ಕಂಬಗಳು;800
ವಿದ್ಯುತ್ ಪರಿವರ್ತಕಗಳು;42
* ಆಧಾರ: ಜಿಲ್ಲಾಡಳಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.