ಶಿರಸಿ: ‘ವ್ಯಕ್ತಿಯ ಕಾಲು ಎಡವಿದರೆ ಅನಾಹುತ ಕಡಿಮೆ. ಆದರೆ ನಾಲಿಗೆ ಎಡವಿದರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸಬೇಕು’ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ವಿಶ್ವಶಾಂತಿ ಸೇವಾ ಟ್ರಸ್ಟ್ ವತಿಯಿಂದ ನಗರದ ಟಿಎಂಎಸ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕಣ್ಣನ್ ಜತೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ನಾವು ಬಳಸುವ ಭಾಷೆಯ ಮೇಲೆ ಹಿಡಿತವಿದ್ದರೆ ಜೀವನ ಪಥದಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.
‘ಬೇರೆ ಭಾಷೆ ಕಲಿಯಿರಿ ಆದರೆ ಕನ್ನಡದ ಭಾವನೆಯಿಂದ ದೂರ ಸರಿಯಬಾರದು’ ಎಂದ ಅವರು, ‘ಜೀವನೋತ್ಸಾಹ ಯಾರಿಂದಲೂ ಕಲಿಯಬಹುದು. ಆದರೆ ಅದರಲ್ಲಿ ಫಟಿಂಗತನ ಇರಬಾರದು’ ಎಂದು ಹೇಳಿದರು.
‘ಅನಕ್ಷರಸ್ಥರು ಮತ್ತು ಅಜ್ಞಾನಿಗಳ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಹಾಗಾಗಿಯೇ ಜನಪದವು ಜೀವನ ಸಂದೇಶ ನೀಡುತ್ತದೆ. ಜನಪದರು ಅನಕ್ಷರಸ್ಥರಾದರೂ ಜ್ಞಾನ ನೀಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.
ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಮಾತನಾಡಿದರು. ರಾಜದೀಪ್ ಟ್ರಸ್ಟ್ ಅಧ್ಯಕ್ಷ ದೀಪಕ ದೊಡ್ಡೂರು, ವಿಶ್ವಶಾಂತಿ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ರಮೇಶ ಹೆಗಡೆ, ಗಾಯತ್ರಿ ರಾಘವೇಂದ್ರ, ರಾಘವೇಂದ್ರ ಬೆಟ್ಟಕೊಪ್ಪ, ನಾರಾಯಣ ಭಾಗವತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.