ADVERTISEMENT

ಶಿರಸಿ: ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ 20ಕ್ಕೆ

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 16:36 IST
Last Updated 18 ಫೆಬ್ರುವರಿ 2022, 16:36 IST
ಡಾ.ಜಿ.ಎಲ್.ಹೆಗಡೆ
ಡಾ.ಜಿ.ಎಲ್.ಹೆಗಡೆ   

ಶಿರಸಿ: ಯಕ್ಷಗಾನ ಅಕಾಡೆಮಿ 2020ನೇ ಸಾಲಿನ ’ಪಾರ್ತಿಸುಬ್ಬ ಪ್ರಶಸ್ತಿ‘ಯನ್ನು ಫೆ.20 ರಂದು ಶಿರಸಿಯ ಟಿ.ಆರ್.ಸಿ. ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಡಿ.ಎಸ್.ಶ್ರೀಧರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಈ ಪ್ರಶಸ್ತಿಯು ₹1 ಲಕ್ಷ ನಗದು, ಪಾರಿತೋಷಕ ಒಳಗೊಂಡಿದೆ. ಒಂದೂವರೆ ವರ್ಷದ ಹಿಂದೆಯೇ ಪ್ರಶಸ್ತಿ ಪ್ರಕಟವಾಗಿದೆ. ಕೋವಿಡ್ ಕಾರಣಕ್ಕೆ ಕಾರ್ಯಕ್ರಮ ನಡೆದಿರಲಿಲ್ಲ. ಅಂದು ಪ್ರಶಸ್ತಿ ಪ್ರದಾನದ ಜತೆಗೆ ಅಕಾಡೆಮಿ ಮಾಜಿ ಅಧ್ಯಕ್ಷ ದಿ.ಎಂ.ಎ.ಹೆಗಡೆ ಸಂಸ್ಮರಣೆ ಕಾರ್ಯಕ್ರಮವೂ ನಡೆಯಲಿದೆ’ ಎಂದು ತಿಳಿಸಿದರು.

‘ಗೌರವ ಪ್ರಶಸ್ತಿಗೆ ಉಡುಪಿಯ ಬಿ.ಸಂಜೀವ ಸುವರ್ಣ, ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಬೆಂಗಳೂರಿನ ಡಾ.ಚಕ್ಕೆರೆ ಶಿವಶಂಕರ್, ಹರಪನಹಳ್ಳಿಯ ಬಿ.ಪರಶುರಾಮ್, ಮಂಗಳೂರಿನ ದಿ.ಕೆ.ತಿಮ್ಮಪ್ಪ ಗುಜರನ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹50 ಸಾವಿರ ನಗದು ಪುರಸ್ಕಾರ ಹೊಂದಿದೆ’ ಎಂದರು.

ADVERTISEMENT

‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ‘ಗೆ ಕುಂದಾಪುರದ ಗೋಪಾಲ ಆಚಾರ್ಯ, ಬೇಲ್ತೂರು ರಮೇಶ್, ಉಡುಪಿಯ ಆವರ್ಸೆ ಶ್ರೀನಿವಾಸ ದುಡಿಪಾಳ, ಮಂಗಳೂರಿನ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಸಂಜಯ್ ಕುಮಾರ್ ಶೆಟ್ಟಿ, ಕುಂದಾಪುರದ ಸುಬ್ರಹ್ಮಣ್ಯ ಧಾರೇಶ್ವರ, ಬಂಟ್ವಾಳದ ವಿಟ್ಲ ಶಂಭು ಶರ್ಮ, ಶಿರಸಿಯ ಎಂ.ಆರ್‌.ಹೆಗಡೆ ಕಾನಗೋಡ, ಶಿರಾ ತಾಲ್ಲೂಕಿನ ಹನುಮಂತರಾಯಪ್ಪ, ಕೋಲಾರದ ಎ.ಎಂ.ಮುಳವಾಗಲಪ್ಪ ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ತಲಾ ₹25 ಸಾವಿರ ಪುರಸ್ಕಾರ ಹೊಂದಿದೆ’ ಎಂದರು.

ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ, ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.