ಯಲ್ಲಾಪುರ: ಮಲೆನಾಡಿನ ರೈತರ ನೈಸರ್ಗಿಕ ಸಂಪತ್ತಾದ ಸೊಪ್ಪಿನಬೆಟ್ಟದ ಸುಸ್ಥಿರ ಅಭಿವೃದ್ಧಿಗಾಗಿ ಅಭಿಯಾನ ನಡೆಸಲು, ಪಟ್ಟಣದ ಟಿಎಂಎಸ್ ಆವರಣದಲ್ಲಿ ಸೋಮವಾರ ನಡೆದ ಸೊಪ್ಪಿನಬೆಟ್ಟ ಸುಸ್ಥಿರ ಅಭಿವೃದ್ಧಿ ಜಾಗೃತಿ ಅಭಿಯಾನದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಯಿತು.
ಪಶ್ಚಿಮಘಟ್ಟದ ಗ್ರಾಮಭೂಮಿ ಸಂರಕ್ಷಣೆಗಾಗಿ ಪಾರಂಪರಿಕ ಬೆಟ್ಟ, ಕಾನು, ದೇವರ ಕಾಡು, ಗೋಮಾಳಗಳನ್ನು ರಕ್ಷಿಸಲು ಮತ್ತು ಜೀವವೈವಿಧ್ಯದ ಉಳಿವಿಗಾಗಿ ಅಭಿಯಾನ ಅವಶ್ಯವೆಂದು ಮುಖಂಡರು ಪ್ರತಿಪಾದಿಸಿದರು.
ವೃಕ್ಷಲಕ್ಷ ಆಂದೋಲನ, ಜಿಲ್ಲಾ ಅಡಿಕೆ ಮತ್ತು ಸಾಂಬಾರು ಬೆಳೆಗಾರರ ಸಂಘ, ಕದಂಬ ಸಾವಯವ ಸಂಸ್ಥೆ, ಜಿಲ್ಲಾ ಸಾವಯವ ರೈತ ಒಕ್ಕೂಟ ಹಾಗೂ ಟಿಎಂಎಸ್ ಆಶ್ರಯದಲ್ಲಿ ಸಭೆ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ‘ಕೆನರಾ ಪ್ರಿವಿಲೇಜ್ ಕಾಯ್ದೆಯಡಿ ಜಿಲ್ಲೆಯ 53,000 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಸ್ವಾತಂತ್ರ್ಯ ಪೂರ್ವದಿಂದಲೂ ಗುರುತಿಸಲಾಗಿದ್ದು, ಸೊಪ್ಪಿನಬೆಟ್ಟವು 1980ರ ಅರಣ್ಯ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ’ ಎಂದರು.
‘ಇದು ಅಡಿಕೆ ಬೆಳೆಗಾರರ ನಿರ್ವಹಣೆಯಲ್ಲಿದೆ. ಕಂದಾಯ ಮತ್ತು ಅರಣ್ಯ ಇಲಾಖೆಗಳ ಜಂಟಿ ಅಧಿಕಾರವಿದ್ದರೂ ಜಿಲ್ಲೆಯ ಬೆಟ್ಟಗಳ ಮೇಲೆ ಅರಣ್ಯ ಇಲಾಖೆಯದ್ದೇ ಹೆಚ್ಚಿನ ಜವಾಬ್ದಾರಿಯಿದೆ. ಇಂತಹ ಬೆಟ್ಟಗಳ ಸಂರಕ್ಷಣೆಯ ಉದ್ದೇಶದಿಂದ ಹಣ್ಣಿನ ಗಿಡ, ಮೊದಲಾದ ಆದಾಯ ತರುವ ಬೆಳೆ ಬೆಳೆಯುವ ಕುರಿತು ರೈತರು ಚಿಂತನೆ ನಡೆಸಬೇಕಿದೆ’ ಎಂದು ಹೇಳಿದರು.
ಯಡಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಕೃಷಿಕ ರವಿ ಭಟ್ಟ ಬರಗದ್ದೆ, ವೃಕ್ಷಲಕ್ಷ ಆಂದೋಲನದ ಪ್ರಮುಖರಾದ ಗಣಪತಿ ಬಿಸಲಕೊಪ್ಪ, ಕೆ.ಎಸ್. ಭಟ್ಟ ಆನಗೋಡ, ಮುಖಂಡ ದತ್ತಾತ್ರೇಯ ಬೊಳಗುಡ್ಡೆ ಇದ್ದರು.
‘ಮೇ 22ರಂದು ಚಾಲನೆ’
‘ಮೇ 22ರಂದು ತಾಲ್ಲೂಕಿನ ಆನಗೋಡಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಸೊಪ್ಪಿನಬೆಟ್ಟದ ಕುರಿತಾಗಿ ಜಾಗೃತಿ ಮೂಡಿಸುವುದು ಮತ್ತು ಮಾಹಿತಿ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ. ಅಂತರರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ಸಂದರ್ಭದಲ್ಲೇ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ವೃಕ್ಷ ಲಕ್ಷ ಆಂದೋಲನದ ಮುಖ್ಯಸ್ಥ ಅನಂತ ಹೆಗಡೆ ಆಶೀಸರ ಅವರು ಜಾಗೃತಿ ಅಭಿಯಾನದ ರೂಪುರೇಷೆ ವಿವರಿಸಿದರು. ‘ನಶಿಸುತ್ತಿರುವ ಬೆಟ್ಟಗಳ ಸಂರಕ್ಷಣೆಗಾಗಿ ವಿವಿಧ ತಳಿಯ ಹಲಸು ಮತ್ತು ಶಮಿ ಬಿದಿರು ಬೆಳೆಯುವುದು ಸೂಕ್ತ ಹಾಗೂ ಲಾಭದಾಯಕ’ ಎಂದು ಕದಂಬ ಸಂಸ್ಥೆಯ ಪ್ರಮುಖ ವಿಶ್ವೇಶ್ವರ ಭಟ್ಟ ಕೋಟೆಮನೆ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.