ADVERTISEMENT

‘ತಾರತಮ್ಯ ಮಾಡದೇ ಸಮೀಕ್ಷೆ ಮಾಡಿ’

ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 15:49 IST
Last Updated 11 ಆಗಸ್ಟ್ 2020, 15:49 IST
ಕಾರವಾರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿದರು.
ಕಾರವಾರ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಮಾತನಾಡಿದರು.   

ಕಾರವಾರ: ‘ಜಿಲ್ಲೆಯಲ್ಲಿ ಪ್ರವಾಹ ಪರಿಹಾರ ಕಾಮಗಾರಿಗಳನ್ನು ವಿಳಂಬ ಮಾಡದೇ ಸಕಾಲದಲ್ಲಿ ನಿರ್ವಹಿಸಬೇಕು. ಪ್ರಕೃತಿ ವಿಕೋಪದಿಂದ ರೈತರ ಬೆಳೆ ನಾಶವಾಗಿರುವ ಬಗ್ಗೆ ಯಾವುದೇ ತಾರತಮ್ಯ ಮಾಡದೇ ಸಮೀಕ್ಷೆ ನಡೆಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಸೂಚಿಸಿದರು.

ಜಿಲ್ಲಾ ಪಂಚಾಯ್ತಿಯಲ್ಲಿಮಂಗಳವಾರ ನಡೆದ ತಿಂಗಳ ಅಭಿವೃದ್ಧಿ ‍ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕೋವಿಡ್ –19 ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ರೋಗಿಗಳಿಗೆ ಸೂಕ್ತವಾದ ಆಹಾರ ಮತ್ತು ಚಿಕಿತ್ಸೆ ನೀಡಬೇಕು. ಇದರಲ್ಲಿ ಯಾವುದೇ ತಾರತಮ್ಯ ಆಗಬಾರದು. ಅಲ್ಲದೇ ಸೋಂಕಿನ ಬಗ್ಗೆ ಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ತೋಟಗಾರಿಕೆ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿದ ಅವರು, ‘ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆಗಳಿಗೆ ಮೊದಲ ಆದ್ಯತೆ ನೀಡಿ ಪರಿಹಾರ ವಿತರಿಸಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿಯು, 23.51 ಹೆಕ್ಟೇರ್ ವಿಸ್ತೀರ್ಣದಲ್ಲಿ ಹೂ ಬೆಳೆದ 541 ರೈತರಿಗೆ ₹ 5.87 ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ಬೆಳೆ ಸಮೀಕ್ಷೆ ಹೊರತು ಪಡಿಸಿ 54.08 ಹೆಕ್ಟೇರ್ ವಿಸ್ತೀರ್ಣದ 1,297 ರೈತರಿಗೆ ₹ 13.52 ಲಕ್ಷ ಪರಿಹಾರಕ್ಕಾಗಿ ಸರ್ಕಾರಕ್ಕೆ ಅನುದಾನದ ಬೇಡಿಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಪರಿಹಾರ ಧನ ವಿತರಿಸಲು ಬೇಡಿಕೆಯಿದೆ. 689.20 ಹೆಕ್ಟೇರ್ ವಿಸ್ತೀರ್ಣದ 1,666 ರೈತರಿಗೆ ₹ 1.03 ಕೋಟಿ ಮೊತ್ತದ ಅನುದಾನ ಬೇಕಾಗುತ್ತದೆ. ಸರ್ಕಾರದ ನಿರ್ಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ ಮಾತನಾಡಿ, ಪ್ರವಾಹದಿಂದ ಹಾನಿಗೊಳಗಾದ ಶಿರಸಿ ತಾಲ್ಲೂಕಿನ ಬದನಗೋಡ ಕೆರೆಯ ಕುರಿತು ಮಳೆಯ ಪರಿಸ್ಥಿತಿ ಅವಲೋಕಿಸಿ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯು, ‘ಪ್ರವಾಹದಿಂದ ಹಾನಿಗೊಳಗಾದ ಬದನಗೋಡ ಕೆರೆ ಪುನರುಜ್ಜೀವನ ಕಾಮಗಾರಿಗೆ ಈಗಾಗಲೇ ಗುತ್ತಿಗೆದಾರರನ್ನು ನೇಮಿಸಲಾಗಿತದೆ. ಕೆರೆ ಕಾಮಗಾರಿಯೂ ಪ್ರಗತಿಯಲ್ಲಿದೆ’ ಎಂದರು.

ವಿದ್ಯಾರ್ಥಿಗಳಿಗೆ ಅಭಿನಂದನೆ:ಕೋವಿಡ್– 19 ಸವಾಲುಗಳ ನಡುವೆ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ ಶಿರಸಿ ಹಾಗೂ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ರ‍್ಯಾಂಕ್ ಪಡೆದುಕೊಂಡ ವಿದ್ಯಾರ್ಥಿಗಳನ್ನು ಜಯಶ್ರೀ ಮೊಗೇರ ಅಭಿನಂದಿಸಿದರು.

ಆತಂಕಗಳ ನಡುವೆಯೂ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಶ್ರಮ ಶ್ಲಾಘನೀಯವಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.