ADVERTISEMENT

ಮೂರು ಕೃಷಿ ಕಾಯ್ದೆಗಳ ರದ್ದತಿಗೆ ರಾಜ್ಯ ಸರ್ಕಾರಕ್ಕೆ ಹಕ್ಕೊತ್ತಾಯ

26ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2021, 11:17 IST
Last Updated 23 ನವೆಂಬರ್ 2021, 11:17 IST
   

ಹೊಸಪೇಟೆ (ವಿಜಯನಗರ): ‘ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಾಗಲೇ ಈ ಮೂರು ಕಾಯ್ದೆಗಳನ್ನು ಜಾರಿಗೆ ತರಲಾಗಿದ್ದು, ಕೂಡಲೇ ಅವುಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನ. 26ರಂದು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50 ಬಂದ್‌ ಮಾಡಲು ತೀರ್ಮಾನಿಸಲಾಗಿದೆ’ ಎಂದು ಸಂಯುಕ್ತ ಕರ್ನಾಟಕ ಹೋರಾಟ ಸಂಘಟನೆಯ ಮುಖಂಡ ಜೆ. ಕಾರ್ತಿಕ್‌ ತಿಳಿಸಿದರು.

‘ಅಂದು ಬೆಳಿಗ್ಗೆ 9ಕ್ಕೆ ನಗರದ ಸಾಯಿಬಾಬಾ ವೃತ್ತದಿಂದ ಹೆದ್ದಾರಿ ಬಳಿಯ ಗಣೇಶ್‌ ಗುಡಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು. ನಂತರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆಯಲಾಗುವುದು. ಸಂಜೆ 4ರ ವರೆಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಮೋದಿಯವರು ಕಾಯ್ದೆ ರದ್ದುಪಡಿಸುವುದಾಗಿ ಹೇಳಿ ಅನೇಕ ದಿನಗಳಾಗಿವೆ. ಆದರೆ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಕೂಡಲೇ ಅಧಿವೇಶನ ಕರೆದು ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ನ. 26ರ ನಂತರ ಸರಣಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಕೃಷಿ ಕಾಯ್ದೆಗಳ ಜೊತೆಗೆ ಜಾನುವಾರು ಪ್ರತಿಬಂಧಕ ಕಾಯ್ದೆ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿಗೆ ಸಂಬಂಧಿಸಿದ ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಆದರೆ, ರೈತರು ಬೆಳೆಯುವ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಅತಿವೃಷ್ಟಿಗೆ ಬಳ್ಳಾರಿ–ವಿಜಯನಗರ ಜಿಲ್ಲೆಗಳಲ್ಲಿ ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳ, ಬಾಳೆ, ಹತ್ತಿ, ಶೇಂಗಾ, ಕಬ್ಬು ಹಾಳಾಗಿದೆ. ಬೆಳೆ ನಷ್ಟಕ್ಕೆ ಓಬಿರಾಯನ ಕಾಲದ ಪರಿಹಾರ ನೀಡಲಾಗುತ್ತಿದೆ. ಹಾಲಿ ಮಾರುಕಟ್ಟೆಯ ದರಕ್ಕೆ ತಕ್ಕಂತೆ ಬೆಳೆಗಳಿಗೆ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿ, ‘ಕೆಲವು ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಕೃಷಿ ಕಾಯ್ದೆ ರದ್ದುಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಬಾಹ್ಯ ಶಕ್ತಿಗಳನ್ನು ತಡೆಯಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ತಿಳಿಸಿದ್ದಾರೆ. ರೈತರ ಹೋರಾಟದಲ್ಲಿ ಶತ್ರುಗಳು ಸೇರಿದ್ದಾರೆ ಎಂದು ಸುಳ್ಳು ಹೇಳುತ್ತಿರುವ ಅವರು, ಅಂತಹ ದುಷ್ಟಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲಿ. ಆದರೆ, ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸಬಾರದು’ ಎಂದರು.

‘26ರ ಹೆದ್ದಾರಿ ತಡೆ ನಂತರ ತಾಲ್ಲೂಕಿನ ರೈತರು ಸಭೆ ಸೇರಿ, ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಆರಂಭಿಸುವುದರ ಸಂಬಂಧ ಚರ್ಚಿಸಲಾಗುವುದು. ಬಳಿಕ ಈ ವಿಷಯವನ್ನು ಗಂಭೀರವಾಗಿ ಕೈಗೆತ್ತಿಕೊಂಡು ಕಾರ್ಖಾನೆ ಪ್ರಾರಂಭಿಸುವುದಕ್ಕೆ ಹೋರಾಟ ನಡೆಸಲಾಗುವುದು. ಹೊಸ ಕಾರ್ಖಾನೆ ಆರಂಭಿಸಲಾಗುವುದು ಎಂದು ಸುಳ್ಳು ಹೇಳಿ ರೈತರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ರೈತರು ಅದಕ್ಕೆ ಕಿವಿಗೊಡಬೇಕಿಲ್ಲ. ನಮ್ಮ ಜನಪ್ರತಿನಿಧಿಗಳು ಬ್ರಿಟಿಷರಿಗಿಂತ ಬಹಳ ಕ್ರೂರಿಗಳು. ರೈತರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಮುಖಂಡರಾದ ಭಾಸ್ಕರ್‌ ರೆಡ್ಡಿ, ಜೆ.ಎನ್‌. ಕಾಳಿದಾಸ್‌, ಕರಿಯಪ್ಪ ಗುಡಿಮನಿ, ಕೆ. ನಾಗರತ್ನಮ್ಮ, ಸಣ್ಣಕ್ಕಿ ರುದ್ರಪ್ಪ, ಘಂಟೆ ಸೋಮಶೇಖರ್‌, ತಳವಾರ ನಾಗರಾಜ್‌, ಬಾಣದ ಮಂಜುನಾಥ ಇದ್ದರು.

‘ಸಚಿವರು ಭೇಟಿ ಕೊಡಬೇಕು’
‘ಅತಿವೃಷ್ಟಿಗೆ ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಆದರೆ, ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಕುಂಟು ನೆಪ ಹೇಳದೆ ಕೂಡಲೇ ರೈತರ ಕಷ್ಟ ಅರಿಯುವ ಕೆಲಸ ಮಾಡಬೇಕು’ ಎಂದು ಸಂಯುಕ್ತ ಕರ್ನಾಟಕ ಹೋರಾಟ ಸಂಘಟನೆಯ ಮುಖಂಡ ಜೆ. ಕಾರ್ತಿಕ್‌ ಆಗ್ರಹಿಸಿದರು.

‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಭೇಟಿ ಕೊಟ್ಟಿಲ್ಲ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ಸಚಿವರು ಅವರ ಜಿಲ್ಲೆಗಳಲ್ಲಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ತಡಮಾಡದೆ ರೈತರ ಹೊಲಗಳಿಗೆ ಭೇಟಿ ಕೊಡಬೇಕು. ತಕ್ಷಣವೇ ಪರಿಹಾರ ಕೊಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.