ADVERTISEMENT

ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 13:26 IST
Last Updated 12 ಆಗಸ್ಟ್ 2022, 13:26 IST
   

ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿಯಲ್ಲಿ ಶುಕ್ರವಾರ ನೀರಿನ ಹರಿವು ಭಾರಿ ಇಳಿಮುಖಗೊಂಡಿದೆ.

1.11 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 29 ಕ್ರಸ್ಟ್‌ಗೇಟ್‌ಗಳಿಂದ ನದಿಗೆ 98 ಸಾವಿರ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಗುರುವಾರ 1.62 ಲಕ್ಷ ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಎಲ್ಲ 33 ಕ್ರಸ್ಟ್‌ಗೇಟ್‌ಗಳಿಂದ ನದಿಗೆ 1.63 ಲಕ್ಷ ಕ್ಯುಸೆಕ್‌ ನೀರು ನದಿಗೆ ಹರಿಸಲಾಗಿತ್ತು. 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ಈಗಾಗಲೇ ಸಂಪೂರ್ಣ ತುಂಬಿದೆ.

ಜಲಾನಯನ ಪ್ರದೇಶ ಹಾಗೂ ಮಲೆನಾಡಿನಲ್ಲಿ ಮಳೆ ತಗ್ಗಿರುವುದರಿಂದ ಜಲಾಶಯದ ಮೇಲ್ಭಾಗ ಹಾಗೂ ಅಣೆಕಟ್ಟೆ ಎದುರು ನದಿಯಲ್ಲಿ ನೀರಿನ ಹರಿವು ತಗ್ಗಿದೆ. ನದಿಯಲ್ಲಿ ತಲೆದೋರಿದ್ದ ಪ್ರವಾಹ ಪರಿಸ್ಥಿತಿ ದೂರವಾಗಿರುವುದರಿಂದ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿಯಲ್ಲಿ ಮೆಕ್ಕೆಜೋಳ, ಭತ್ತದ ಗದ್ದೆಗಳಿಗೆ ನುಗ್ಗಿದ ನೀರು ಹೊರಹೋಗಿದೆ. ಹಂಪಿ ಬಾಳೆಗದ್ದೆಗಳಿಂದಲೂ ನೀರು ದೂರ ಸರಿದಿದೆ.

ADVERTISEMENT

ಆದರೆ, ಸತತ ನಾಲ್ಕೈದು ದಿನಗಳ ವರೆಗೆ ಗದ್ದೆಗಳಲ್ಲಿ ನೀರು ನಿಂತಿದ್ದರಿಂದ ತೇವಾಂಶ ಅಧಿಕವಾಗಿ ಬೆಳೆಗಳಿಗೆ ಕೊಳೆರೋಗ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಇನ್ನು, ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದ್ದ ಹಂಪಿ ಸ್ಮಾರಕಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಇಲ್ಲ. ಆಗಾಗ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.