ADVERTISEMENT

ತುಂಗಭದ್ರಾ ಅಣೆಕಟ್ಟೆ | 80 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹ?

ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಅಳವಡಿಕೆ ವಿಳಂಬ: ಮುಂದಿನ ತಿಂಗಳಿಗೆ ವಿಸ್ತರಣೆ

ಎಂ.ಜಿ.ಬಾಲಕೃಷ್ಣ
Published 10 ಮೇ 2025, 5:36 IST
Last Updated 10 ಮೇ 2025, 5:36 IST
ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರ ಸಂಗ್ರಹವಿದ್ದ ನೀರು  –ಪ್ರಜಾವಾಣಿ ಚಿತ್ರ/ ಲವ ಕೆ.
ತುಂಗಭದ್ರಾ ಜಲಾಶಯದಲ್ಲಿ ಶುಕ್ರವಾರ ಸಂಗ್ರಹವಿದ್ದ ನೀರು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್‌ಗೆ ಕ್ರಸ್ಟ್‌ಗೇಟ್ ಅಳವಡಿಸುವ ಕೆಲಸ ಸ್ವಲ್ಪ ವಿಳಂಬವಾಗಿದ್ದು, ಜೂನ್‌ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದರ ಜತೆಗೆ ಈ ಬಾರಿ ಮಳೆಗಾಲ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಸಂಗ್ರಹಿಸಲಾಗುತ್ತದೆಯೇ ಎಂಬ ‍ಪ್ರಶ್ನೆ ಮೂಡಿದೆ.

70 ವರ್ಷಗಳ ಹಿಂದೆ ಅಳವಡಿಸಲಾಗಿರುವ ಅಣೆಕಟ್ಟೆಯ ಎಲ್ಲಾ 33 ಕ್ರಸ್ಟ್‌ಗೇಟ್‌ಗಳನ್ನೂ ಬದಲಿಸಬೇಕು ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದರೂ ಈ ವರ್ಷ ಒಂದು ಗೇಟ್ ಬಿಟ್ಟು ಉಳಿದ ಗೇಟ್ ಅಳವಡಿಕೆ ಅಸಾಧ್ಯ ಎಂಬುದು ಈಗಾಗಲೇ ಸಾಬೀತಾಗಿದೆ. ಇದೇ ಕಾರಣಕ್ಕೆ ಮಳೆಗಾಲದಲ್ಲಿ ಪ್ರಮಾಣದಲ್ಲಿ ಅಂದರೆ 195,78 ಟಿಎಂಸಿ ಅಡಿ ನೀರು (ಅಣೆಕಟ್ಟೆಯ ಗರಿಷ್ಠ ಎತ್ತರ ಸಮುದ್ರ ಮಟ್ಟದಿಂದ 1,633 ಅಡಿ) ಸಂಗ್ರಹಿಸುವುದಕ್ಕೆ ತಜ್ಞರ ಒಲವಿಲ್ಲ ಎಂದು ಹೇಳಲಾಗುತ್ತಿದೆ.

‘ಕಳೆದ ವರ್ಷ ಆಗಸ್ಟ್ 10ರಂದು ಗರಿಷ್ಠ ನೀರು ಸಂಗ್ರಹಿಸಿದ ದಿನವೇ 19ನೇ ಕ್ರಸ್ಟ್‌ಗೇಟ್ ಕೊಚ್ಚಿಕೊಂಡು ಹೋಗಿತ್ತು. ಈ ಬಾರಿ ಮಳೆಗಾಲ ಉತ್ತಮ ಮಳೆ ಆಗಲಿ, ಬಿಡಲಿ, ಗರಿಷ್ಠ 80 ಟಿಎಂಸಿ ಅಡಿಯಷ್ಟು ನೀರನ್ನು ಮಾತ್ರ ಜಲಾಶಯದಲ್ಲಿ ಸಂಗ್ರಹಿಸಿದರೆ ಉತ್ತಮ’ ಎಂದು ಕ್ರಸ್ಟ್‌ಗೇಟ್ ತಜ್ಞ ಕನ್ನಯ್ಯ ನಾಯ್ಡು ನೀಡಿದ ಹೇಳಿಕೆ ಈಗಾಗಲೇ ಆಂಧ್ರಪ್ರದೇಶದ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ADVERTISEMENT

ಆದರೆ ತುಂಗಭದ್ರಾ ಮಂಡಳಿ ಸದ್ಯ ಇದರ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಮಳೆಗಾಲ ಪರಿಸ್ಥಿತಿ ನೋಡಿಕೊಂಡು ನೀರು ಸಂಗ್ರಹ ವಿಚಾರ ನಿರ್ಧರಿಸುವುದಾಗಿ ಮಂಡಳಿ ಮೂಲಗಳು ಹೇಳಿವೆ.

ಗೇಟ್‌ ಅಳವಡಿಕೆ ವಿಳಂಬ: 19ನೇ ಗೇಟ್‌ ಅಳವಡಿಕೆಯ ಗುತ್ತಿಗೆ ಪಡೆದಿರುವ ಅಹಮದಾಬಾದ್‌ನ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮೆಷಿನರಿ ಪ್ರೊಜೆಕ್ಟ್ ಕಂಪನಿ ಇನ್ನೂ ತನ್ನ ಕೆಲಸ ಆರಂಭಿಸಿಲ್ಲ. ಈ ಮೊದಲಿನ ಮಾಹಿತಿಯಂತೆ ಮೇ ಎರಡನೇ ವಾರ ಕಾಮಗಾರಿ ಆರಂಭವಾಗಿ ತಿಂಗಳ ಅಂತ್ಯದ ವೇಳೆಗೆ ಕೊನೆಗೊಳ್ಳಬೇಕಿತ್ತು.

‘ಕಂಪನಿ ಇನ್ನೂ ಕೆಲಸ ಆರಂಭಿಸಿಲ್ಲ. ಮುಂದಿನ ವಾರ ಕಾಮಗಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ. ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಸಂಗ್ರಹವಾಗುವವರೆಗೂ ಗೇಟ್ ಅಳವಡಿಕೆ ಕಾರ್ಯ ನಡೆಸಬಹುದು. ಹೀಗಾಗಿ ಜೂನ್‌ ತಿಂಗಳಲ್ಲೂ ಗೇಟ್ ಅಳವಡಿಕೆ ಯಾವುದೇ ಅಡ್ಡಿ ಇಲ್ಲದೆ ನಡೆಯಬಹುದಾಗಿದೆ’ ಎಂದು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

40 ಟಿಎಂಸಿ ನೀರು ಸಂಗ್ರಹದವರೆಗೂ ಗೇಟ್ ಕಾಮಗಾರಿ ಸಾಧ್ಯ ಈ ಬಾರಿ 19ನೇ ಗೇಟ್‌ಗಷ್ಟೇ ಕ್ರಸ್ಟ್‌ಗೇಟ್ ಅಳವಡಿಕೆ ಈ ಮಳೆಗಾಲ ಅಪಾರ ನೀರು ನದಿಪಾಲು ಅನಿವಾರ್ಯ ಸಾಧ್ಯತೆ

ಪ್ರವಾಸಿಗರಿಗೆ ನಿರ್ಬಂಧ ಇಲ್ಲ ‘ಭಾರತ–ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನೆಲೆಸಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ಅಣೆಕಟ್ಟೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಿ ಒಳಗೆ ಬಿಡಲಾಗುತ್ತಿದೆ. ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ಹೇರಿಲ್ಲ’ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಮೂಲಗಳು ತಿಳಿಸಿವೆ.

7.69 ಟಿಎಂಸಿ ಅಡಿ ನೀರು ಈಚಿನ ಕೆಲವು ದಿನಗಳಲ್ಲಿ ತುಂಗಭಧ್ರಾ ನದಿಯ ಅಚ್ಚುಕಟ್ಟು ಪ್ರದೇಶಗಳಲ್ಲಿ ಮಳೆಯಾಗಿರುವುದರಿಂದ ಒಳಹರಿವು ಆರಂಭವಾಗಿದ್ದು ಬಿರು ಬೇಸಿಗೆಯಲ್ಲೂ ಶುಕ್ರವಾರ 2386 ಕ್ಯುಸೆಕ್‌ನಷ್ಟು ಒಳಹರಿವು ದಾಖಲಾಗಿದೆ. ‌ ಜಲಾಶಯದಲ್ಲಿ ಸದ್ಯ 7.69 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಈ ವೇಳೆ ಕನಿಷ್ಠ ಮಟ್ಟದಲ್ಲಿ (3.45 ಟಿಎಂಸಿ ಅಡಿ) ನೀರು ಇತ್ತು. ಡೆಡ್‌ ಸ್ಟೋರೇಜ್‌ ಮತ್ತು ಅಗತ್ಯದ ಕುಡಿಯುವ ನೀರಿಗಷ್ಟೇ ಜಲಾಶಯದಲ್ಲಿ ನೀರಿತ್ತು. ಈ ಬಾರಿ ಅದರ ದುಪ್ಪಟ್ಟು ಪ್ರಮಾಣದಲ್ಲಿ ನೀರು ಸಂಗ್ರಹ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.