ಹೊಸಪೇಟೆ (ವಿಜಯನಗರ): ನಗರ ಮತ್ತು ತಾಲ್ಲೂಕಿನ ವಿವಿಧೆಡೆ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಸುರಿದ ಬಿರುಸಿನ ಮಳೆಯಿಂದ ಕೌಲ್‌ಪೇಟೆಯಲ್ಲಿ ಒಂದು ಮನೆ ಕುಸಿದಿದ್ದು, ಕಮಲಾಪುರ ಕೆರೆ ಕೋಡಿ ಬಿದ್ದಿದೆ. ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಜನರಿಗೆ ತೊಂದರೆ ಉಂಟಾಯಿತು.
ಕೌಲ್‌ಪೇಟೆಯಲ್ಲಿ ಸುಲೇಮಾನ್ ಎಂಬುವವರಿಗೆ ಸೇರಿದ ಮಣ್ಣಿನ ಮನೆ ಕುಸಿಯುವಾಗ ಮನೆಯೊಳಗೆ ಯಾರೂ ಇರಲಿಲ್ಲ. ಕುಟುಂಬದ ಸದಸ್ಯರು ಬುಧವಾರ ಬೆಳಿಗ್ಗೆಯೇ ಕಲಬುರ್ಗಿಯ ಬಂದೇ ನವಾಜ್ ದರ್ಗಾಕ್ಕೆ ತೆರಳಿದ್ದರಿಂದ ದೊಡ್ಡ ದುರಂತ ತಪ್ಪಿತು.
ಆದರೆ ಮನೆಯೊಳಗೆ ಇದ್ದ ಬೆಲೆಬಾಳುವ ಸಾಮಗ್ರಿಗಳೆಲ್ಲ ನಾಶವಾಗಿದ್ದು, ಕುಟುಂಬ ಕಂಗಾಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕಮಲಾಪುರ ಕೆರೆ ಕೋಡಿ ಬಿದ್ದ ಕಾರಣ ಸಮೀಪದ ಹೊಲಗದ್ದೆಗಳು, ತೋಡು, ಕಾಲುವೆಗಳಲ್ಲಿ ನೀರು ರಭಸವಾಗಿ ಹರಿದಿದ್ದು, ಇದರ ಪ್ರಭಾವ ವಿಜಯವಿಠ್ಠಲ ದೇವಸ್ಥಾನಕ್ಕೆ ತೆರಳುವ ಮಂದಿಗೂ ಉಂಟಾಯಿತು. ತಳವಾರಘಟ್ಟ ಸಮೀಪ ಕಾಲುವೆ ನೀರು ರಸ್ತೆಯಲ್ಲೇ ರಭಸವಾಗಿ ಹರಿಯುತ್ತಿದ್ದ ಕಾರಣ ಗುರುವಾರ ಬಹುತೇಕ ರಸ್ತೆ ಬಂದ್ ಆಗಿತ್ತು. ಜನರು ಬಳಸು ದಾರಿಯಲ್ಲಿ ಗೆಜ್ಜಲ ಮಂಟಪದತ್ತ ಬರುವುದು ಅನಿವಾರ್ಯವಾಯಿತು.
ಕೆಸರುಮಯ ವಾಹನ ನಿಲುಗಡೆ ಪ್ರದೇಶ: ವಿಶ್ವವಿಖ್ಯಾತ ಕಲ್ಲಿನ ರಥ ಇರುವ ವಿಜಯ ವಿಠ್ಠಲ ದೇವಸ್ಥಾನಕ್ಕೆ ಗೆಜ್ಜಲ ಮಂಟಪದಿಂದ ಸುಮಾರು ಒಂದು ಕಿಲೋಮೀಟರ್ ಮಣ್ಣಿನ ರಸ್ತೆಯಲ್ಲಿ ನಡೆದೇ ಹೋಗಬೇಕು ಇಲ್ಲವೇ ಬ್ಯಾಟರಿ ವಾಹನದಲ್ಲಿ ತೆರಳಬೇಕು. ಆದರೆ ಗೆಜ್ಜಲ ಮಂಟಪದ ವಾಹನ ನಿಲುಗಡೆ ಸ್ಥಳ ಕೆಸರುಮಯವಾಗಿದ್ದು, ಚಾಲಕರು ಪರದಾಡಿದರು.
ಹಲವು ದಿನಗಳಿಂದ ಇಲ್ಲಿ ಇದೇ ಪರಿಸ್ಥಿತಿ ಇದೆ, ಮಳೆ ಬಂದು ಪರಿಸ್ಥಿತಿ ಇನ್ನಷ್ಟು ಹೆದಗೆಟ್ಟಿತು. ಹಂಪಿ ವಿಶ್ವಪಾರಂಪರಿಕ ತಾಣ ಪ್ರದೇಶ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ) ಏನು ಮಾಡುತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಹಲವು ಪ್ರವಾಸಿಗರು ಮತ್ತು ಪ್ರವಾಸಿ ಮಾರ್ಗದರ್ಶಿಗಳು ಆಕ್ಷೇಪಿಸಿದರು.
ನಗರದ ಹೊರವಲಯದ ರಾಯರಕೆರೆ ಪರಿಸರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತವಾಗಿವೆ. ನಗರದ ಪ್ರವಾಸಿ ಮಂದಿರ ಪ್ರದೇಶದಲ್ಲಿ 6 ಸೆಂ.ಮೀ.ನಷ್ಟು ಮಳೆಯಾಗಿದ್ದರೆ, ಗಾದಿಗನೂರಿನಲ್ಲಿ 2.5 ಸೆಂ.ಮೀ.ನಷ್ಟು ಮಳೆಯಾಗಿದೆ.
ಶಾಲೆಗಳಿಗೆ ಸ್ವಯಂಪ್ರೇರಿತ ರಜೆ: ನಗರದ ಕೆಲವು ಖಾಸಗಿ ಶಾಲೆಗಳು ಕೆ.ಜಿ. ತರಗತಿಗಳು, 1ರಿಂದ 4ನೇ ತರಗತಿಯ ಮಕ್ಕಳಿಗೆ ಗುರುವಾರ ಸ್ವಯಂಪ್ರೇರಿತ ರಜೆ ನೀಡಿದ್ದವು.
ನಾಲ್ಕು ಟಾಸ್ಕ್‌ಫೋರ್ಸ್
ಮಳೆ ಸಂಬಂಧಿತ ಹಾನಿ ಪರಿಹಾರ ಇತರ ತುರ್ತು ಕೆಲಸಗಳಿಗಾಗಿ ನಗರದಲ್ಲಿ ನಾಲ್ಕು ಟಾಸ್ಕ್‌ಫೋರ್ಟ್‌ಗಳನ್ನು ರಚಿಸಲಾಗಿದೆ. ಒಂದೊಂದು ತಂಡದಲ್ಲಿ ತಲಾ 10 ಮಂದಿ ವಾಹನ ಅಗತ್ಯದ ಸಲಕರಣೆ ಇರುತ್ತದೆ. ಹೀಗಾಗಿ ಒಟ್ಟು 40 ಮಂದಿ 24/7 ತುರ್ತು ಕೆಲಸಕ್ಕೆ ಲಭ್ಯ ಇರುತ್ತಾರೆ ಎಂದು ನಗರಸಭೆ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.