ADVERTISEMENT

ಕೆಸರು ಗದ್ದೆಯಾದ ರಸ್ತೆಗಳು; ವಿದ್ಯಾರ್ಥಿಗಳು ಪರದಾಟ 

​ಪ್ರಜಾವಾಣಿ ವಾರ್ತೆ
Published 19 ಜುಲೈ 2021, 12:30 IST
Last Updated 19 ಜುಲೈ 2021, 12:30 IST
   

ಅರಸೀಕೆರೆ/ಉಚ್ಚಂಗಿದುರ್ಗ: ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಗಮವಾಗಿ ನಡೆಯಿತು.

ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಬೆಳಿಗ್ಗೆಯೇ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಬಸ್ ಗಾಗಿ ಕಾದು ಕುಳಿತಿದ್ದರು. ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ರಸ್ತೆ, ಬಸ್ ವ್ಯವಸ್ಥೆ ಇಲ್ಲದಿದ್ದರಿಂದ ಪೋಷಕರೊಂದಿಗೆ ಸ್ವಂತ ವಾಹನಗಳಲ್ಲಿ ತೆರಳಿದರು

ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಭಾರಿ ಮಳೆಗೆ ಹಿರೇಮೆಗಳಗೆರೆ, ಉಚ್ಚಂಗಿದುರ್ಗ, ತುಂಬಿಗೆರೆ, ಕಮ್ಮತ್ತಹಳ್ಳಿ ಪರೀಕ್ಷಾ ಕೇಂದ್ರಗಳ ಶಾಲಾ ಆವರಣ ಕೆಸರು ಗದ್ದೆಯಂತಾಗಿದ್ದವು.

ADVERTISEMENT

ಜಂಗಮ ತುಂಬಿಗೆರೆ ಗ್ರಾಮದ ಸರಕಾರಿ ಪ್ರೌಢ ಶಾಲಾ ಪರೀಕ್ಷೆ ಕೇಂದ್ರಕ್ಕೆ ವಿದ್ಯಾರ್ಥಿಗಳು ತೆರಳಲು ರಸ್ತೆ ಇಲ್ಲದರಿಂದ ದೂರದಲ್ಲಿ ವಾಹನಗಳನ್ನು ಬಿಟ್ಟು ಕಲ್ಲು, ಮುಳ್ಳು ಲೆಕ್ಕಿಸದೆ 700 ಮೀಟರ್ ದೂರದ ಪರೀಕ್ಷಾ ಕೇಂದ್ರಕ್ಕೆ ನಡೆದುಕೊಂಡು ಹೋದರು.

ರಸ್ತೆಯಲ್ಲಿನ ಗುಂಡಿಗಳಲ್ಲಿ ಸಂಪೂರ್ಣ ನೀರು ನಿಂತಿದ್ದರಿಂದ ವಿದ್ಯಾರ್ಥಿಗಳು ಆತುರವಾಗಿ ಹೋಗುವಾಗ ಎಡವಿ ಬಿದ್ದರು. ಶೂ, ಚಪ್ಪಲಿಗಳು ಕೆಸರಲ್ಲಿ ಸಿಕ್ಕಿಕೊಂಡಿದ್ದರಿಂದ ತೊಂದರೆ ಅನುಭವಿಸಿದರು.

ಮಳೆಗೆ ರಸ್ತೆಯು ಸಂಪೂರ್ಣ ಹಾಳಾಗಿದೆ. ಮುಂದಿನ ಪರೀಕ್ಷೆಗೂ ಮೊದಲು ರಸ್ತೆ ದುರಸ್ತಿ ಕಾಮಗಾರಿಗೆ ಕ್ರಮ ಕೈಗೊಳ್ಳುವುದಾಗಿ ಅಣಜಿಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಣ್ಣ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.