ಹೊಸಪೇಟೆ (ವಿಜಯನಗರ): ಹಣಕ್ಕೆ ಬೇಡಿಕೆ ಇಟ್ಟಿದ್ದ ಕೂಡ್ಲಿಗಿ ಪೊಲೀಸ್ ಠಾಣೆಯ ಇಬ್ಬರು ಕಾನ್ ಸ್ಟೆಬಲ್ ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆತಿಳಿಸಿದರು
ಕಾನ್‌ಸ್ಟೆಬಲ್‌ಗಳಾದ ಮಂಜುನಾಥ, ಶರಣಪ್ಪ ಅವರನ್ನು ಅಮಾನತು ಮಾಡಲಾಗಿದೆ. ಕೂಡ್ಲಿಗಿಯ ಈಡಿಗರ ಸಂತೋಷ ಎಂಬುವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಸಂತೋಷ ಅವರು ಆಡಿಯೊ ಸಮೇತ ದೂರು ಕೊಟ್ಟಿದ್ದಾರೆ. ಈ ಸಂಬಂಧ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ' ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
'ಹಣ ಕೊಡದಿದ್ದರೆ ಮಟ್ಕಾ ಆಡುವವರನ್ನು ಬಂಧಿಸಲಾಗುವುದು ಎಂದು ಮಂಜುನಾಥ, ಶರಣಪ್ಪ ಅವರು ಸಂತೋಷ ಅವರಿಗೆ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ತಿಳಿಸಿದರು.
ಸುಲಿಗೆ: ತನಿಖೆಗೆ ಮೂರು ತಂಡ:
ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದ ಸುಲಿಗೆ ಪ್ರಕರಣದ ತನಿಖೆಗೆ ಕೂಡ್ಲಿಗಿ ಡಿವೈಎಸ್ಪಿ ನೇತೃತ್ವದಲ್ಲಿ ಕೊಟ್ಟೂರು, ಕೂಡ್ಲಿಗಿ, ಸಂಡೂರು ಠಾಣೆಯ ಇನ್ ಸ್ಪೆಕ್ಟರ್ ಅವರನ್ನು ಒಳಗೊಂಡ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಕನಕಗಿರಿಯ ಕಾಸಿಂ ಮಿಯಾ ಎಂಬ ಹಣ್ಣಿನ ವ್ಯಾಪಾರಿ ಮಂಗಳೂರಿನಿಂದ ಕೊಪ್ಪಳಕ್ಕೆ ಹೋಗುತ್ತಿದ್ದರು. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಮರಿಯಮ್ಮನಹಳ್ಳಿ ಬಳಿಯ ಜೈ ಹಿಂದ್ ಧಾಬಾ ಬಳಿ ವಾಹನ ನಿಲ್ಲಿಸಿ ನಿದ್ರೆಗೆ ಜಾರಿದ್ದಾರೆ. ಈ ವೇಳೆ ನಾಲ್ವರು ಬಂದು, ಅವರಿದ್ದ ವಾಹನದ ಗಾಜು ಒಡೆದು ಹೆದರಿಸಿ ಅವರ ಬಳಿಯಿದ್ದ ₹67000 ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.