ADVERTISEMENT

ವಿಜಯನಗರ: ಗಾಂಧಿ ಜಯಂತಿಗೆ ವಿಜಯನಗರ ಉದ್ಘಾಟನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ–ಸಚಿವ ಆನಂದ್‌ ಸಿಂಗ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 13:51 IST
Last Updated 17 ಸೆಪ್ಟೆಂಬರ್ 2021, 13:51 IST
ಆನಂದ್‌ ಸಿಂಗ್‌
ಆನಂದ್‌ ಸಿಂಗ್‌   

ಹೊಸಪೇಟೆ (ವಿಜಯನಗರ): ‘ನೂತನ ವಿಜಯನಗರ ಜಿಲ್ಲೆಯ ಉದ್ಘಾಟನಾ ಸಮಾರಂಭ ಮಹಾತ್ಮ ಗಾಂಧೀಜಿ ಜನ್ಮದಿನವಾದ ಅಕ್ಟೋಬರ್ 2ರಂದು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾರಂಭ ನಗರದಲ್ಲಿ ಉದ್ಘಾಟಿಸುವರು’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ತಿಳಿಸಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ನಿಮಿತ್ತ ಶುಕ್ರವಾರ ನಗರದ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಅಂದಿನ ಕಾರ್ಯಕ್ರಮದಲ್ಲಿ ಜಿಲ್ಲೆ ಘೋಷಿಸಿರುವ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಾಲಿ, ಮಾಜಿ ಶಾಸಕ, ಸಚಿವರು ಪಾಲ್ಗೊಳ್ಳುವರು. ಹಂಪಿ ವಾಸ್ತುಶಿಲ್ಪದ ಮಾದರಿಯಲ್ಲಿ 100 ಅಡಿ ಭವ್ಯ ವೇದಿಕೆ ನಿರ್ಮಿಸಲಾಗುತ್ತದೆ. ನಗರದ ಕ್ರೀಡಾಂಗಣದ ಸುತ್ತ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗುವುದು. ಹೆಚ್ಚಿನ ಜನಸಂದಣಿ ಆಗದಂತೆ ನೋಡಿಕೊಳ್ಳಲಾಗುವುದು. ಶನಿವಾರದಿಂದಲೇ ಸಿದ್ಧತಾ ಕಾರ್ಯಗಳು ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಹೊಸ ಜಿಲ್ಲೆ ಕಟ್ಟುವುದು ಸವಾಲಿನ ಕೆಲಸ. ಆದರೆ, ಇತರೆ ಜಿಲ್ಲೆಗಳ ಅಭಿವೃದ್ಧಿ, ಕಟ್ಟಿದ ಅನುಭವ ನೋಡಿಕೊಂಡು ವಿಜಯನಗರ ಕಟ್ಟಲಾಗುವುದು. ಆದರೆ, ಕೆಲವು ಜಿಲ್ಲೆಗಳ ಅಭಿವೃದ್ಧಿಗೆ ಸಾಕಷ್ಟು ವಿಳಂಬವಾಗಿದೆ. ಆ ರೀತಿ ವಿಜಯನಗರದಲ್ಲಿ ಆಗುವುದಿಲ್ಲ. ಬೇಗ ಎಲ್ಲಾ ಕಾಮಗಾರಿಗಳನ್ನು ಆರಂಭಿಸಲಾಗುವುದು. ಅನುದಾನ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು‌. ಅ. 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ’ ಎಂದು ತಿಳಿಸಿದರು.

₹6 ಕೋಟಿಯಲ್ಲಿ ನವೀಕರಣ:‘ಟಿಎಸ್‍ಪಿ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗುತ್ತಿರುವ ಜಿಲ್ಲಾಡಳಿತ ಕಟ್ಟಡ ₹6 ಕೋಟಿಯಲ್ಲಿಲ್ಲಿ ನವೀಕರಣಗೊಳ್ಳುತ್ತಿದೆ. ಈಗಾಗಲೇ 3 ಕೋಟಿ ಬಿಡುಗಡೆ ಮಾಡಲಾಗಿದೆ. ಕಾರಿಗನೂರು ಬಳಿಯ ಇಎಸ್‍ಐ ಕಟ್ಟಡದಲ್ಲಿ ಎಸ್ಪಿ ಕಚೇರಿ ಸ್ಥಾಪಿಸಲಾಗುತ್ತಿದೆ’ ಎಂದರು.

‘ಟಿಎಸ್‍ಪಿ ಕಚೇರಿ ಆವರಣದಲ್ಲಿಯೇ 35 ಎಕರೆ ವಿಶಾಲ ಜಾಗದಲ್ಲಿ ಮೆಡಿಸಿಟಿ ಸ್ಥಾಪಿಸಲಾಗುವುದು. ಇದರಲ್ಲಿ ₹110 ಕೋಟಿ ವೆಚ್ಚದಲ್ಲಿ 250 ಹಾಸಿಗೆಯ ಆಸ್ಪತ್ರೆ, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು, 23 ಎಕರೆಯಲ್ಲಿ ವಸತಿ ಗೃಹ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.