ADVERTISEMENT

ಆತ್ಮಬಲದಿಂದ ಸಾಮಾಜಿಕ ಕಾರ್ಯ ಸಾಧ್ಯ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 6:15 IST
Last Updated 19 ಸೆಪ್ಟೆಂಬರ್ 2011, 6:15 IST

ತಾಳಿಕೋಟೆ: ಆತ್ಮಬಲ ಗಳಿಸಿಕೊಂಡವನು ಸಾಮಾಜಿಕ ಕಾರ್ಯ ಮಾಡಲು ಸಾಧ್ಯ. ಆಧ್ಯಾತ್ಮಿಕ ಬಲ ಹೆಚ್ಚಲು ಅಧ್ಯಾತ್ಮ ಬಲವನ್ನು ಹೆಚ್ಚಿಸಿಕೊಳ್ಳ ಬೇಕು. ಅಂತಹ ಬಲವನ್ನು ಹೆಚ್ಚಿಸಿಕೊಂಡಿರುವ ಖಾಸ್ಗತೇಶನಿಂದಾಗಿ ಈ  ನೆಲದಲ್ಲಿ ಇಂತಹ ಸಾಮಾಜಿಕ ಪುಣ್ಯಕಾರ್ಯಗಳು ಜರುಗುತ್ತಿವೆ ಎಂದು ಹಾಲಕೇರಿಯ ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಆರಾಧ್ಯ ದೈವ ಶ್ರಿಖಾಸ್ಗತ ಮಹಾಶಿವಯೋಗಿಗಳ 115ನೇ ಪುಣ್ಯ ಸ್ಮರಣೋ ತ್ಸವ ಸಮಾರಂಭ ಹಾಗೂ  ಕಾಶಿಯ ಡಾ. ಅಲ್ಲಮಪ್ರಭು ದೇವರು ಎಂಟು ದಿನಗಳ ಕಾಲ ನಡೆಸಿ ಕೊಟ್ಟ  ಆಧ್ಯಾತ್ಮಿಕ ಪ್ರವಚನ ಮಹಾ ಮಂಗಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಜ್ಞಾನ ಎಷ್ಟೇ ಪ್ರಬಲವಾಗಿ ಬೆಳೆದಿದ್ದರೂ ಅದು ಭೌತಿಕ ಸಂಪತ್ತನ್ನು ನೀಡಬಹುದೇ ವಿನಃ ಶಾಶ್ವತವಾದ ನೆಮ್ಮದಿಯನ್ನು ನೀಡಬಲ್ಲ ಅಧ್ಯಾತ್ಮಿಕದ ಸುಖವನ್ನು ನೀಡದು ಎಂದು ನುಡಿದರು.

ಈ ಹಿನ್ನೆಲೆಯಲ್ಲಿ ವೀರಶೈವ ಧರ್ಮ ಮಹತ್ವವನ್ನು ಪಡೆದುಕೊಳ್ಳುತ್ತದೆ. ಆಚಾರವಂತ ರಾಗಿ, ನೀತಿವಂತರಾಗಿ ಸಮಾಜಮುಖಿಗಳಾಗುವ ತತ್ವವನ್ನು ಇದು ಹೇಳುತ್ತದೆ. ವೀರಶೈವ, ಲಿಂಗಾಯಿತ ಬೇರೆಯಲ್ಲ, ಒಳಪಂಗಡಗಳ ಜಗಳ ಬದಿಗಿಟ್ಟು ಒಂದಾಗಬೇಕು. ಎಲ್ಲರನ್ನು ಒಂದು ಗೂಡಿಸಿಕೊಂಡು ಮುನ್ನಡೆಯಬೇಕು. ಭಕ್ತಿ ಮತ್ತು ಕಾಯಕ ತತ್ವವನ್ನು ಉಸಿರಾಗಿಸಿಕೊಳ್ಳಬೇಕು. ನ್ಯಾಯಬದ್ಧ ಕಾಯಕದ ಧನದಲ್ಲಿ ಸೋಹಂ ಎಂದವರಿಗೆ ದಾಸೋಹ ಮಾಡಬೇಕು ಎಂದರು.

ಕುಂಟೋಜಿಯ ಚನ್ನವೀರದೇವರು ಮಾತನಾಡಿ, ಬದುಕಿನ ಒಂಟಿತನದಲ್ಲಿ ಮನಸ್ಸಿಗೆ ನೆಮ್ಮದಿಯನ್ನು ನೀಡಲು ಅಧ್ಯಾತ್ಮಿಕ ಮಾರ್ಗಕ್ಕಿಂತ ಉತ್ತಮವಾದುದು ಇಲ್ಲ. ಮನಸ್ಸಿನ ವಿಕಸನಕ್ಕೆ ಸತ್ಸಂಗ ಒಳ್ಳೆಯವರೊಡನೆ ಒಡನಾಟವಿರಬೇಕು ಒಳ್ಳೆಯದನ್ನು ಮಾಡುವ ದೃಢ ಮನಸ್ಕರಾಗ ಬೇಕು. ಸತ್ಸಂಗವಿಲ್ಲದಿದ್ದಲ್ಲಿ ಮನಸ್ಸು ಕತ್ತಲಾಗು ತ್ತದೆ ಎಂದರು.

ನಂದವಾಡಗಿ-ಜಾಲವಾದಿ ಮಹಾಂತಲಿಂಗ ಶಿವಾಚಾರ್ಯರು, ಕಲಿಯುಗದ ಪವಾಡ ಪುರುಷರೆಂದರೆ ಖಾಸ್ಗತೇಶ, ಅವರ ಜೀವನವೇ ಒಂದು ಪವಾಡ ಎಂದು ಬಣ್ಣಿಸಿದರು.

ಕಾಶಿಯ ಡಾ.ಅಲ್ಲಮಪ್ರಭು ದೇವರು, ಸವದತ್ತಿ ಶಿವಬಸವ ಸ್ವಾಮೀಜಿ, ತಮದಡ್ಡಿ ಶಿವಶಂಕರ ಸ್ವಾಮೀಜಿ, ಗುಂಡಕನಾಳ ಗುರುಲಿಂಗ ಶಿವಾಚಾರ್ಯರು, ಕೊಡೆಕಲ್ಲ ಶಿವಕುಮಾರ ದೇವರು ಮಾತನಾಡಿ, ಕಷ್ಟಗಳು ಬಂದರೂ ಧರ್ಮ ಬಿಡಬೇಡಿ ಅದು ಮನುಷ್ಯನ ಪರೀಕ್ಷಾ ಕಾಲವಾಗಿದ್ದು ಗೆದ್ದು ಬಂದರೆ ಮನಸ್ಸು, ಮನೆ, ನಾಡು ನೆಮ್ಮದಿಯಿಂದ ಇರಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿದ್ದ  ರಂಗಭೂಮಿ ಹಾಗೂ ಚಲನಚಿತ್ರನಟ ರಾಜು ತಾಳಿಕೋಟೆ, ಪಿಎಸ್‌ಐ ಮಲ್ಲಯ್ಯ ಮಠಪತಿ ಮಾತನಾಡಿದರು.

ಖಾಸ್ಗತೇಶ್ವರಮಠದ ವಿರಕ್ತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ರೂ. 16ಲಕ್ಷ ವೆಚ್ಚದಲ್ಲಿ ಮಠದ ಗೋಪುರ ನಿರ್ಮಾಣಕ್ಕೆ ನೆರವು ನೀಡಿದ ವಿಜಾಪುರದ ಆರ್. ಆರ್. ಸರಾಫ್, ಪುರಸಭೆ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಉಪಸ್ಥಿತರಿದ್ದರು. 

ಕಾಶಿನಾಥ ಮುರಾಳ ಸ್ವಾಗತಿಸಿದರು.  ಹಿರೂರ ಗುರುಮೂರ್ತಿ ದೇವರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.