ADVERTISEMENT

ಇನ್ನೂ ಬೆಳಗದ ಹೈಮಾಸ್ಟ್ ದೀಪ!

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 5:50 IST
Last Updated 12 ಸೆಪ್ಟೆಂಬರ್ 2011, 5:50 IST

ವಿಜಾಪುರ: ಐತಿಹಾಸಿಕ ಪ್ರವಾಸಿ ತಾಣವಾಗಿರುವ ವಿಜಾಪುರ ನಗರವನ್ನು ಸದಾ ಝಗಮಗಿಸುವ ಉದ್ದೇಶದಿಂದ ಪ್ರಮುಖ ಸ್ಥಳಗಳಲ್ಲಿ ಹೊಸದಾಗಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಇನ್ನೂ ಬೆಳಕು ನೀಡುತ್ತಿಲ್ಲ.

ವಿಜಾಪುರ ನಗರದಲ್ಲಿ ಗಾಂಧಿ ಚೌಕ್, ಬಸವೇಶ್ವರ ಚೌಕ್, ಶಿವಾಜಿ ಚೌಕ್, ಡಾ.ಬಿ.ಆರ್. ಅಂಬೇಡ್ಕರ ಚೌಕ್, ಬಸ್ ನಿಲ್ದಾಣ, ಸಿದ್ಧೇಶ್ವರ ದೇವಸ್ಥಾನದ ಎದುರು ಹೀಗೆ ಆರು ಸ್ಥಳಗಳಲ್ಲಿ ಹಿಂದೆ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿತ್ತು. ಈಗ ವಿಜಾಪುರದ 25 ಪ್ರಮುಖ ಸ್ಥಳಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ನಗರಸಭೆ ಮುಂದಾಗಿದೆ.

ಬಲಿದಾನದ ಸಂಕೇತವಾಗಿರುವ ಹುತಾತ್ಮರ ಸ್ಮಾರಕವುಳ್ಳ ವಿಜಾಪುರದ ಮೀನಾಕ್ಷಿ ಚೌಕ್, ಬೈಪಾಸ್ ರಸ್ತೆಯ ಜಮಖಂಡಿ ಕ್ರಾಸ್, ಆದರ್ಶ ನಗರ, ಮುರಾಣಕೇರಿ, ಜಾಮೀಯಾ ಮಸೀದೆ ರಸ್ತೆ, ಟಕ್ಕೆಗಳಲ್ಲಿ ಹೊಸದಾಗಿ ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲಾಗಿದೆ.

ಎತ್ತರವಾಗಿರುವ ಕಂಬಕ್ಕೆ ಶುಭ್ರ ಬಿಳಿ ಬಣ್ಣದ ದೀಪಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಈ ದೀಪಗಳು ಕಂಬಕ್ಕೆ ನೇತಾಡುತ್ತಿವೆಯೇ ವಿನಾ ಇನ್ನೂ ಬೆಳಗಿ ಕತ್ತಲನ್ನು ಓಡಿಸುತ್ತಿಲ್ಲ.

ಈ ಬಗ್ಗೆ ವಿಚಾರಿಸಿದರೆ ನಗರಸಭೆಯಲ್ಲೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. `ಆರಂಭದಲ್ಲಿ ಅಗತ್ಯ ನಿಯಮಾವಳಿಗಳನ್ನು ಪೂರೈಸದೆ ಇರುವುದು ಇದಕ್ಕೆ ಕಾರಣ~ ಎಂದು ಕೆಲವರು ಹೇಳುತ್ತಿದ್ದರೆ,  `ನಗರಸಭೆಯ ಅಧ್ಯಕ್ಷರು ಹಾಗೂ ನಗರ ಶಾಸಕರ ಮಧ್ಯದ ಮುಸುಕಿನ ಗುದ್ದಾಟವೇ ಇದಕ್ಕೆ ಕಾರಣ~ ಎಂದು ಇನ್ನು ಹಲವರು ಹೇಳುತ್ತಿದ್ದಾರೆ.

`ವಿಜಾಪುರ ಪ್ರಮುಖ ಐತಿಹಾಸಿಕ ನಗರ. ವಿಶ್ವವಿಖ್ಯಾತ ಗೊಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಹಲವು ಪ್ರಸಿದ್ಧ ಸ್ಮಾರಕಗಳು ಇಲ್ಲಿವೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ನಗರ ಸೌಂದರ್ಯೀಕರಣದ ಭಾಗವಾಗಿ ವಿಜಾಪುರ ನಗರದ ಪ್ರಮುಖ 25 ಸ್ಥಗಳಲ್ಲಿ ಹೊಸದಾಗಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತಿದೆ. ಪ್ರತಿ ವಾರ್ಡ್‌ಗೆ ಒಂದು ಹೈಮಾಸ್ಟ್ ದೀಪ ಇರುವಂತೆ ಯೋಜನೆ ರೂಪಿಸಲಾಗಿದೆ~ ಎನ್ನುತ್ತಾರೆ ನಗರಸಭೆಯ ಅಧ್ಯಕ್ಷ ಪರಶುರಾಮ ರಜಪೂತ.

`ಮೀನಾಕ್ಷಿ ಚೌಕ್ ಸೇರಿದಂತೆ ಆರು ಕಡೆಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಅವುಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿದೆ. ಮಹಾವೀರ ಕಾಲೋನಿ, ಡಾ.ನಾಗೂರ ಆಸ್ಪತ್ರೆಯ ಸರ್ಕಲ್ ಸೇರಿದಂತೆ ಇನ್ನು ಕೆಲವೆಡೆ ಅಡಿಪಾಯದ ಕೆಲಸ ನಡೆಯುತ್ತಿದೆ. ಹೈಮಾಸ್ಟ್ ದೀಪಕ್ಕೆ ನಗರಸಭೆ ಸದಸ್ಯರು ಪತ್ರ ನೀಡಿದ್ದು, ಠರಾವು ಮಾಡಲಾಗಿದೆ. ಸಾರ್ವಜನಿಕರಿಂದಲೂ ಬೇಡಿಕೆ ಬಂದಿದೆ~ ಎಂದು ಅವರು ಹೇಳುತ್ತಾರೆ.

`ಪ್ರತಿಯೊಂದು ಹೈಮಾಸ್ಟ್ ದೀಪಕ್ಕೆ 3.80 ಲಕ್ಷ ರೂಪಾಯಿಯಿಂದ 4 ಲಕ್ಷ ರೂಪಾಯಿ ಖರ್ಚಾಗುತ್ತದೆ. ನಗರಸಭೆಯ ಸಾಮಾನ್ಯ ಅನುದಾನದಲ್ಲಿಯೇ ಈ ದೀಪಗಳನ್ನು ಅಳವಡಿಸಲಾಗುತ್ತಿದೆ. ಈ ಎಲ್ಲ ಹೊಸ 25 ಹೈಮಾಸ್ಟ್ ದೀಪಗಳು ಕಾರ್ಯ ನಿರ್ವಹಿಸಿದರೆ ಇಡೀ ವಿಜಾಪುರ ನಗರ ಶುಭ್ರ ಬಿಳಿ ವಿದ್ಯುತ್ ಬೆಳಕಿನಿಂದ ಕಂಗೊಳಿಸಲಿದೆ. ಪ್ರತಿಯೊಂದು ಹೈಮಾಸ್ಟ್ ದೀಪ 300ರಿಂದ 400 ಅಡಿಯವರೆಗೆ ಬೆಳಕು ಬೀರುವುದರಿಂದ ಆ ಪ್ರದೇಶದಲ್ಲಿ ಇರುವ ಇತರ ದೀಪಗಳನ್ನು ತೆರವುಗೊಳಿಸಲಾಗುವುದು. ಇದರಿಂದಾಗಿ ವಿದ್ಯುತ್ ಬಿಲ್ಲಿನಲ್ಲಿಯೂ ಉಳಿತಾಯವಾಗಲಿದೆ. ಹಂತ ಹಂತವಾಗಿ ಈ ಕಾಮಗಾರಿಯ ಅನುಷ್ಠಾನವಾಗಲಿದೆ~ ಎಂದರು.

`ವಿಜಾಪುರ ನಗರದಲ್ಲಿ 12 ಸಾವಿರ ಟ್ಯೂಬ್‌ಲೈಟ್, 4 ಸಾವಿರ ಸೋಡಿಯಂ ಸೆಟ್, 162 ಮರಕ್ಯೂರಿ  ದೀಪಗಳಿವೆ. ಬೀದಿ ದೀಪಗಳ ವಿದ್ಯುತ್ ಬಿಲ್ಲು ತಿಂಗಳಿಗೆ ಸರಾಸರಿ 10ರಿಂದ 12 ಲಕ್ಷ ರೂಪಾಯಿ ಬರುತ್ತಿದೆ. ಬೀದಿ ದೀಪಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರನ್ನು ದೂರವಾಣಿ ಸಂಖ್ಯೆ:222474ಗೆ ಕರೆ ಮಾಡಿ ದಾಖಲಿಸಬಹುದು~ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.