ADVERTISEMENT

ಕನ್ನಡ ಜಾಗೃತಿಗೆ `ಆನಂದ ಸಿರಿ'

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:22 IST
Last Updated 7 ಡಿಸೆಂಬರ್ 2012, 6:22 IST

ವಿಜಾಪುರ: `ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ನಾಡು-ನುಡಿ ಮತ್ತು ಸಂಸ್ಕೃತಿ ಬಿಂಬಿಸುವ ಆನಂದ ಸಿರಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ' ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದರು.

ಇಲ್ಲಿಯ ಆನಂದ ನಗರದ ದಾಮ್ಮದೇವಿ ದೇವಸ್ಥಾನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ `ಆನಂದ ಸಿರಿ' ಸಾಂಸ್ಕೃತಿಕ ಉತ್ಸವ ಉದ್ಘಾಟಿಸಿ ಮಾತನಾಡಿದರು.

ಆನಂದ ಸಿರಿ ಲಾಂಛನ ಬಿಡುಗಡೆ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ನೆಲ, ಜಲ, ಭಾಷೆಯ ಬಗ್ಗೆ ಅಭಿಮಾನವಿಟ್ಟು ಆನಂದ ಸಿರಿ ಎಂಬ ಧಾರ್ಮಿಕ ಹಬ್ಬ ಆಚರಿಸುತ್ತಿರುವುದು ಮಹತ್ವದ ಕಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ, ಇಂದಿನ ಟಿವಿ ಹಾಗೂ ಸಿನಿಮಾ ಯುಗದಲ್ಲಿ ಭಾರತೀಯ ಪರಂಪರೆ ಬಿಂಬಿಸುವ ಭರತ ನಾಟ್ಯ, ಯಕ್ಷಗಾನ, ಜಾನಪದ ಗೋಷ್ಠಿ, ಜಾನಪದ ಸಾಹಿತ್ಯ- ನೃತ್ಯಕ್ಕೆ ನಾವು ಆದ್ಯತೆ ನೀಡಬೇಕಿದೆ. ಈ ದೇವಸ್ಥಾನ ಸಮಿತಿ ಆ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ವಾಲಿ ಮಾತನಾಡಿದರು. ದಾನಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಅಪ್ಪು ಇಟ್ಟಂಗಿ, ತಾವು ಹಮ್ಮಿಕೊಂಡಿರುವ ಆನಂದ ಸಿರಿ ಕಾರ್ಯಕ್ರಮದ ಮಾಹಿತಿ ನೀಡಿದರು.

ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎಂ.ಬಿ. ಮೂಲಿಮನಿ, ಸದಸ್ಯರಾದ ಎಂ.ಎಸ್. ಪಾಟೀಲ, ಕಾರ್ಯದರ್ಶಿ ಎಚ್.ಎಂ. ಬೋರಾವತ ವೇದಿಕೆಯಲ್ಲಿದ್ದರು. ಬಸವರಾಜ ಮರನೂರ ವಂದಿಸಿದರು. ನಾಗರಾಜ ಶಂ. ಬಿರಾದಾರ ಕಾರ್ಯಕ್ರಮ ನಿರೂಪಿಸಿದರು.

ತದನಂತರ ಉಡುಪಿಯ ಯಕ್ಷಗಾನ ಕಲಾವಿದೆ ನಿಶಾ ಎಸ್. ಅಮೀನ್ ಅವರ ಗಣಪತಿ ಆರಾಧನೆ, ಶ್ರಿಧರ ಭಟ್‌ಅವರ ಭರತನಾಟ್ಯ, ಉಡುಪಿಯ ವಡಭಾಂಡೇಶ್ವರ ಚಂಡೆ ಬಳಗದಿಂದ ಮೈ ನವಿರೇಳಿಸುವ ವಾದ್ಯ ಕಾರ್ಯಕ್ರಮ, ಚಿಕ್ಕ ಮಗಳೂರಿನ ಪ್ರಿಯಾಂಕಾ ಹಾಗೂ ಶ್ರೇಯಾಂಕಾ ಅವರಿಂದ ನೃತ್ಯ  ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.