ADVERTISEMENT

ಕಬ್ಬಿಗೆ ರೂ 3 ಸಾವಿರ ದರ: ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:05 IST
Last Updated 19 ಡಿಸೆಂಬರ್ 2012, 8:05 IST

ವಿಜಾಪುರ: `ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ಪ್ರತಿ ಟನ್‌ಗೆ ರೂ.3500 ದರ ನಿಗದಿ ಪಡಿಸಿ ಮೊದಲ ಕಂತಿನಲ್ಲಿ ರೂ.3000 ಕೊಡಬೇಕು' ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.

ವಿಜಾಪುರ ಹೊರತು ಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ರೈತರ ಸಮ್ಮುಖದಲ್ಲಿ ಕಾರ್ಖಾನೆಗಳ ಮುಖ್ಯಸ್ಥರ ಸಭೆ ನಡೆಸಿ ಬೆಲೆ ನಿಗದಿ ಮಾಡಿದ್ದಾರೆ. ಆದರೆ, ನಮ್ಮ ಜಿಲ್ಲೆಯಲ್ಲಿ ಆ ಕಾರ್ಯ ಇನ್ನೂ ಆಗಿಲ್ಲ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನಮ್ಮ ಜಿಲ್ಲೆಯ ಕಬ್ಬಿನಲ್ಲಿ ಸಕ್ಕರೆಯ ಅಂಶ ಶೇ.12ರಿಂದ 13ರಷ್ಟು ಇದೆ. ಪ್ರತಿ ಟನ್ ಕಬ್ಬಿಗೆ ಕೇವಲ ರೂ.2200 ನಿಗದಿ ಪಡಿಸಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಕಾರ್ಖಾನೆಗಳ ಮಾಲೀಕರು ರೈತರು ಕೇಳಿದಷ್ಟು ಹಣ ನೀಡುವುದಾಗಿ ಹೇಳುತ್ತಿದ್ದರೂ ಸರ್ಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ತಕ್ಷಣ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರ ಸಭೆ ನಡೆಸಿ ಸಕ್ಕರೆ ಅಂಶ ಆಧಾರಿಸಿ ದರ ನಿಗದಿ ಮಾಡಬೇಕು ಎಂದರು.ತೊಗರಿಗೆ ಸುಗ್ಗಿಯ ಮೊದಲು ರೂ.4500 ದರವಿತ್ತು. ರಾಶಿಯ ಸಂದರ್ಭದಲ್ಲಿ ರೂ.3600ಕ್ಕೆ ಕುಸಿದಿದೆ. ತೊಗರಿಗೆ ಪ್ರತಿ ಕ್ವಿಂಟಾಲ್‌ಗೆ ಕನಿಷ್ಟ ರೂ.8000, ಹತ್ತಿಗೆ ರೂ. 4000 ದರ ನಿಗದಿ ಮಾಡಬೇಕು.

ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಸಂಘದ ಪದಾಧಿಕಾರಿಗಳಾದ ಶಿವಶರಣಪ್ಪಗೌಡ ಬಿರಾದಾರ, ಮಲ್ಲಿಕಾರ್ಜುನ ಕೆಂಗನಾಳ, ಬಸನಗೌಡ ಧರ್ಮಗೊಂಡ, ಪರಶುರಾಮ, ಕುಮಾರಸ್ವಾಮಿ ಹಿರೇಮಠ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT