ADVERTISEMENT

ಕಲ್ಯಾಣ ದರ್ಶನ ಮಾಡಿಸಿದ ಸ್ವಾಮೀಜಿ!

ಎಂ.ಬಿ.ಹೆಬ್ಬಾಳ.
Published 12 ಸೆಪ್ಟೆಂಬರ್ 2013, 5:36 IST
Last Updated 12 ಸೆಪ್ಟೆಂಬರ್ 2013, 5:36 IST
ವಿಜಾಪುರದ ದಲಿತ ಎ.ಎಂ. ಸಾಣಕರ ಅವರ ಮನೆಯಲ್ಲಿ ಸಹಭೋಜನ ಸವಿದ ನಿಜಗುಣಾನಂದ ಸ್ವಾಮೀಜಿ.
ವಿಜಾಪುರದ ದಲಿತ ಎ.ಎಂ. ಸಾಣಕರ ಅವರ ಮನೆಯಲ್ಲಿ ಸಹಭೋಜನ ಸವಿದ ನಿಜಗುಣಾನಂದ ಸ್ವಾಮೀಜಿ.   

ವಿಜಾಪುರ: 12ನೇ ಶತಮಾನ ಭಾರತಕ್ಕಷ್ಟೇ ಅಲ್ಲ, ವಿಶ್ವದ ಕ್ರಾಂತಿಗೆ ಹೊಸ ಅರ್ಥವನ್ನು ನಿರೂಪಿಸಿದ ಸುವರ್ಣಕಾಲ. ಜಗದ ಜನರ ಮೈಲಿಗೆ ತೊಳೆದು, ಜಾತಿ, ವರ್ಣ, ವರ್ಗ, ಲಿಂಗಭೇದ ರಹಿತ ಸಮಾಜವನ್ನು ವಾಸ್ತವದಲ್ಲಿ ಆಚರಣೆಗೆ ತರಲು ಶ್ರಮಿಸಿದ ಕಾಲ. ಶ್ರೇಣಿಕೃತ ಜಾತಿ ವ್ಯವಸ್ಥೆಯ ಕರಾಳ ಕೂಪದಲ್ಲಿ ಬಿದ್ದು ಈ ನಾಡಿನ ಜನರು ಒದ್ದಾಡುತ್ತಿರುವಾಗ ಬಸವಾದಿ ಪ್ರಮಥರು ಅದನ್ನು ನಿವಾರಿಸಿ, ಸಮಾ ನತೆಯ ಸಮುದಾಯ ಜಾರಿಗೆ ಬರುವಂತಾಗಲು ಶ್ರಮಿಸಿದ ಸುವರ್ಣಕಾಲ.

12ನೇ ಶತಮಾನವನ್ನು ನೆನಪಿಸುವ ಕಾರ್ಯ ಕಳೆದೊಂದು ತಿಂಗಳಿನಿಂದ ವಿಜಾಪುರ ನಗರದಲ್ಲಿ ನಡೆಯಿತು. ಇದಕ್ಕೆ ಕಾರಣ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರ ‘ಕಲ್ಯಾಣ ದರ್ಶನ' ಪ್ರವಚನ.

ಜಾತಿ ವ್ಯವಸ್ಥೆಯ ಮೇಲುಸ್ತರದ ಅಗ್ರಹಾರದಲ್ಲಿ ಹುಟ್ಟಿದ ಬಸವಣ್ಣ, ಒಂದೊಂದೇ ಮೆಟ್ಟಿಲುಗಳನ್ನು ಇಳಿದು ಸಮಾಜದ ಕಟ್ಟಕಡೆಯ ಕೆಳಸ್ತರದಲ್ಲಿರುವ ಹೊಲಗೇರಿಗೆ ನಡೆದು ಬಂದು ‘ಪಂಚಮ ವರ್ಗದ ಮಾದಾರ ಚನ್ನಯ್ಯನ ಮನೆಯಲ್ಲಿ ಅತ್ಯಾನಂದದಿಂದ ಅಂಬಲಿ ಕುಡಿದು ಅವನ ಮನೆಯ ಮಗ ನಾನು' ಎಂದು ಅಸ್ಪೃಶ್ಯನನ್ನು ಅಪ್ಪಿ ಮುದ್ದಾಡಿದ ಮಹಾ ಮಾನವತಾವಾದಿ. ಶರಣ ಪಡೆಯನ್ನು ಕಟ್ಟಿ, ವ್ಯಕ್ತಿ ಕಲ್ಯಾಣದ  ಜೊತೆಗೆ ಸೃಷ್ಟಿ ಕಲ್ಯಾಣವನ್ನು ಬಯಸಿ ಕ್ರಾಂತಿಯ ಕಹಳೆಯನ್ನು ಮೊಳಗಿಸಿ ದರು. ಈ ಪ್ರಸ್ತುತ ವಿಷಯದ ಮೇಲೆ  ಸತತ 22 ದಿನಗಳ ಕಾಲ ವಿಜಾಪುರದ ಗುರುಪಾದೇಶ್ವರ ನಗರದಲ್ಲಿರುವ ತೋಂಟದಾರ್ಯ ಅನುಭವ ಮಂಟಪದಲ್ಲಿ ಪ್ರವಚನ ನೀಡಿದ ನಿಜಗುಣಾನಂದ ಸ್ವಾಮೀಜಿ, ಅದೇ ಬಸವಣ್ಣನವರ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.

ನಿಜಗುಣಾನಂದರು ಹುಟ್ಟಿದ್ದು ಸಾಂಪ್ರದಾಯಿಕ ವೈದಿಕ ಮನೆತನದಲ್ಲಿ. ಬಾಲ ಬಸವನ ಹಾಗೆ ಚಿಕ್ಕ ವಯಸ್ಸಿ ನಲ್ಲಿಯೇ ಆ ವ್ಯವಸ್ಥೆಯಿಂದ ಹೊರ ಬರಲು ಪ್ರಯತ್ನಿಸಿದರು. `ಪ್ರವಚನ ಪಿತಾಮಹ' ಕೂಡಲ ಸಂಗಮದ ಲಿಂಗಾನಂದ ಸ್ವಾಮೀಜಿ ಅವರ ಪ್ರಖರ ವೈಚಾರಿಕ ಪ್ರವಚನ ಶೈಲಿ ಹಾಗೂ ವ್ಯಕ್ತಿತ್ವಕ್ಕೆ ಮಾರುಹೋದರು. ಮೈಸೂರಿ ನಲ್ಲಿ ಅವರ ಶಿಷ್ಯತ್ವ ಸ್ವೀಕರಿಸಿ, `ಲಿಂಗಾ ಯತ ಧರ್ಮದ' ಪ್ರವಚನ ಕಾರರಾದರು. ಆ ಮೂಲಕ ಸಮಾಜದ ಜನರಲ್ಲಿರುವ ಅಜ್ಞಾನ, ಮೂಢ ನಂಬಿಕೆ, ಮಡಿ-ಮೈಲಿಗೆಗಳ ಅನಾಚಾರ ಗಳನ್ನು ತೊಡೆದು ಹಾಕಲು ಶ್ರಮಿಸು ತ್ತಿದ್ದಾರೆ. ಅವರ ನೇರ, ದಿಟ್ಟ, ಪ್ರಖರ ವೈಚಾರಿಕ ನುಡಿಗೆ ಮಾರುಹೋದ ಬಸವನಾಡಿನ ಜನರು ಸಾಗರೋಪಾದಿ ಯಲ್ಲಿ ಸೇರಿ, ಶರಣರ ವ್ಯಕ್ತಿತ್ವದ ದರ್ಶನ ಪಡೆದರು.

`ಲಿಂಗಾಯತರು ಆಧುನಿಕ ಬ್ರಾಹ್ಮಣರಾಗುತ್ತಿದ್ದಾರೆ' ಎಂದು ಸದಾ ಸ್ವಾಮೀಜಿ ಆತಂಕ ವ್ಯಕ್ತಪಡಿಸುತ್ತಾರೆ. ಬಸವ ಧರ್ಮೀಯರ ಕರ್ತವ್ಯ ಪ್ರಜ್ಞೆ ಯನ್ನು ಎಚ್ಚರಿಸುವ ದಿಸೆಯಲ್ಲಿ, ದೀನ-ದಲಿತರ ಜೊತೆಗೆ ಹೇಗೆ ಸಾಮರಸ್ಯದ ಬದುಕನ್ನು ಸಾಗಿಸಬೇಕೆಂದು ನೆನೆಪಿ ಸುವ ರೀತಿಯಲ್ಲಿ ದಲಿತರಾದ ಎ.ಎಂ. ಸಾಣಕರ ಅವರ ಮನೆಗೆ ಸ್ವ-ಇಚ್ಛೆಯಿಂದ ತೆರಳಿ ಅವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ಅವರ ಕುಟುಂಬ, ನೆರೆಹೊರೆ, ಆತ್ಮೀಯರ ಜೊತೆ ಬೆರೆತು ಹಿತವಚನ ಹೇಳಿದರು.

ಬಾಯಿ ಮಾತಿನಲ್ಲಿ `ಸಮಾನತೆ ಬೇಕು' ಎಂದು ಹೇಳದೆ ಅದನ್ನು ಖುದ್ದಾಗಿ ಆಚರಿಸಿ ತೋರಿಸಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷೆ ಭಾರತಿ ಪಾಟೀಲ, ಕೆ.ಎಸ್. ಪಾಟೀಲ, ಎಸ್.ಡಿ. ಕೃಷ್ಣಮೂರ್ತಿ,

ಸುನೀಲ್ ಬೇನಾಳ, ಯು.ಎಲ್. ಪೂಜಾರಿ, ಮಲಗೊಂಡ, ಶ್ರೀಧರ ಸಾಣಕರ, ಎಸ್.ಡಿ.ನಾಗುಣಿಶೆಟ್ಟಿ, ಸಿದ್ದು ಭೂಸರಡ್ಡಿ, ಮಲ್ಲಿಕಾರ್ಜುನ ಹಿರೇಮಠ, ತಾರಾ ಎಸ್.ಭೂಸರಡ್ಡಿ ಇತರರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.