ADVERTISEMENT

ಕಾರ್ಮಿಕ ಸಮ್ಮೇಳನ ಜ. 4ರಿಂದ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 8:04 IST
Last Updated 19 ಡಿಸೆಂಬರ್ 2012, 8:04 IST

ವಿಜಾಪುರ: ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್‌ನಿಂದ 20ನೇ ಅಖಿಲ ಭಾರತ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ಜನವರಿ 4ರಿಂದ 6ರ ವರೆಗೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. 20 ರಾಜ್ಯಗಳ ಸಹಸ್ರಾರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಹೇಳಿದರು.

ಸಂಘಟಿತ-ಅಸಂಘಟಿತ ಕಾರ್ಮಿಕರ ಬದುಕು ಶೋಚನೀಯವಾಗಿದ್ದು, ಈ ಸಮ್ಮೇಳನದಲ್ಲಿ ಆ ಬಗ್ಗೆ ಚರ್ಚೆ ನಡೆಯಲಿದೆ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯು ಕಾರ್ಮಿಕರ ಬದುಕನ್ನು ಉಸಿರುಗಟ್ಟಿಸುವಂತೆ ಮಾಡಿದೆ.

ಇಂತಹ ಸಂದರ್ಭದಲ್ಲಿ ಎಲ್ಲ ವಿಭಾಗದ ಕಾರ್ಮಿಕರು ಒಂದುಗೂಡಿ ಸಮರಶೀಲ ಆಂದೋಲನ ಬೆಳೆಸುವುದು ಅನಿವಾರ್ಯ ಎಂದರು.ಕಾರ್ಮಿಕವಿರೋಧಿ ಜಾಗತೀಕರಣ- ಖಾಸಗೀಕರಣ ನೀತಿಗಳನ್ನು ಕೈಬಿಡಬೇಕು. ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸದೇ ಇನ್ನಷ್ಟು ವಿಸ್ತರಿಸಬೇಕು.

ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಕಾಯಂ ಸ್ವರೂಪದ ಕೆಲಸ ನಿರ್ವಹಿಸುವ ಎಲ್ಲ ಗುತ್ತಿಗೆ ಕಾರ್ಮಿಕರನ್ನು ಆ ಹುದ್ದೆಗಳಲ್ಲಿ ವಿಲೀನಗೊಳಿಸಬೇಕು. ಐಎಲ್‌ಓ ಮಾನದಂಡದಂತೆ ಜೀವನಾವಶ್ಯಕ ಕನಿಷ್ಟ ವೇತನವನ್ನು ರೂ 15,000 ಕಡಿಮೆಯಿರದಂತೆ ನಿಗದಿಪಡಿಸಬೇಕು.

ADVERTISEMENT

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ನಿಗದಿತ ವೇತನ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನವೂ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಕುರಿತು ಸಮ್ಮೇಳನದಲ್ಲಿ ಚರ್ಚಿಸಿ ಹೋರಾಟ ರೂಪಿಸಲಾಗುವುದು ಎಂದರು.

ಕಾರ್ಮಿಕ ಮುಖಂಡರಾದ ಕೃಷ್ಣ ಚಕ್ರವರ್ತಿ, ಶಂಕರ್ ಸಹಾ, ಕೆ. ರಾಧಾಕೃಷ್ಣ, ಪ್ರವಾಶ್ ಘೋಷ್ ಮತ್ತಿತರರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಬೇಕು ಎಂದು ಮನವಿ ಮಾಡಿದರು. ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಎಚ್.ಟಿ. ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.