ADVERTISEMENT

ಕೃಷಿ ಬೆಲೆ ಆಯೋಗ, ನೀತಿ ಯಾವ ಪುರುಷಾರ್ಥಕ್ಕೆ?

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 11:21 IST
Last Updated 11 ಏಪ್ರಿಲ್ 2017, 11:21 IST

ವಿಜಯಪುರ: ಕೇಂದ್ರ–ರಾಜ್ಯ ಸರ್ಕಾರಗಳು ಯಾವ ಪುರುಷಾರ್ಥಕ್ಕೆ ಕೃಷಿ ಬೆಲೆ ಆಯೋಗ, ಕೃಷಿ ಬೆಲೆ ನೀತಿ ರೂಪಿಸಿವೆ ಎಂಬುದೇ ತಿಳಿಯದಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ಪ್ರಶ್ನಿಸಿದರು.

ಈ ಆಯೋಗಗಳು ಸರ್ಕಾರಕ್ಕೆ ವರದಿ ಸಲ್ಲಿಸಿದರೂ, ಸಂಬಂಧಿಸಿದವರು ಅದನ್ನು ಪರಿಗಣಿಸುತ್ತಿಲ್ಲ. ಸಮರ್ಪಕ ವಾಗಿ ಸ್ಪಂದಿಸುತ್ತಿಲ್ಲ. ಇದೊಂದು ಶುದ್ಧ ಮೂರ್ಖತದ ನಿರ್ಧಾರವಿದ್ದಂತೆ ಎಂದು ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ–ರಾಜ್ಯ ಸರ್ಕಾರಗಳು ಇನ್ನಾದರೂ ರೈತರ ಕಣ್ಣೋರೆಸುವ ಢೋಂಗಿತನಕ್ಕೆ ಇತಿಶ್ರೀ ಹಾಕಲಿ. ರೈತರ ಸಮಸ್ಯೆಗೆ ಸ್ಪಂದಿಸಿ ಸಂಪೂರ್ಣ ಕೃಷಿಸಾಲ ಮನ್ನಾ ಮಾಡಬೇಕು. ತೊಗರಿ ಖರೀದಿ ಕೇಂದ್ರ ನಿರಂತರವಾಗಿ ಆರಂಭದಲ್ಲಿರ ಬೇಕು. ರೈತರ ಬಗ್ಗೆ ನಿರ್ಲಕ್ಷ್ಯ ಮಾಡಿದರೆ, ಮಹಾತ್ಮ ಗಾಂಧೀಜಿ ಅನುಸರಿಸಿದ ಅಹಿಂಸಾ ಹೋರಾಟ ಮಾರ್ಗದಲ್ಲಿ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದು ಬಾಬಾಗೌಡ ಇದೇ ಸಂದರ್ಭ ಹೇಳಿದರು.

ADVERTISEMENT

ಬರ ರಾಜ್ಯದ ಜತೆಗೆ ದೇಶಕ್ಕೆ ಆವರಿಸಿದೆ. ಭೀಕರ ಬರದ ಹೊಡೆತಕ್ಕೆ ಸಿಲುಕಿರುವ ರೈತರು ಸಾಲ ಮಾಡಿ ಮತ್ತೆ ಬಿತ್ತಿದರೂ ಬೆಳೆ ಕೈ ಸೇರದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೃಷಿಕರ ಬೆಳೆ ಸಾಲ ಮನ್ನಾ ಮಾಡಲು ಮುಂದಾಗಬೇಕು.

ಆದರೆ ಈ ನಿಟ್ಟಿನಲ್ಲಿ ಯಾವುದೇ ಚಿಂತನೆ ನಡೆದಿಲ್ಲ. ಇದರ ನಡುವೆ ತಮ್ಮ ರಾಜಕೀಯ ಲಾಭಕ್ಕಾಗಿ ಉದ್ಯಮಿಗಳ ₨ 7 ಲಕ್ಷ ಕೊೋಟಿ ಸಾಲಮನ್ನಾ ಮಾಡುವ ಯೋಚನೆ ಸರ್ಕಾರದ್ದಾಗಿದೆ. ದೇಶದ ರೈತರ ₨ 6 ಲಕ್ಷ ಕೋಟಿ ಸಾಲ ಮನ್ನಾ ಮಾಡಲು ಆರ್ಥಿಕ ಹೊರೆ ಬೀಳುತ್ತದೆ ಎಂಬ ಸಬೂಬು ನೀಡಲಾಗುತ್ತಿದೆ ಎಂದು ಬಾಬಾಗೌಡ ಪಾಟೀಲ ಕಿಡಿಕಾರಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಉತ್ತರ ಪ್ರದೇಶದಲ್ಲಿ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ₨ 1 ಲಕ್ಷ ಮೊತ್ತದ ರೈತರ ಸಾಲ ಮನ್ನಾ ಮಾಡಿರುವುದು ರೈತರ ಮೇಲಿನ ಕಾಳಜಿಯಿಂದಲ್ಲ. ಬದಲಾಗಿ ಮುಂಬರುವ ರಾಜ್ಯಗಳ ವಿಧಾನಸಭಾ ದೃಷ್ಟಿಯಿಂದ. ಚುನಾವಣಾ ಪ್ರಚಾರ ಕೈಗೊಳ್ಳಲು ಸಾಲ ಮನ್ನಾ ಮಾಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಮತಗಳನ್ನು ಪಡೆಯುವ ಗಿಮಿಕ್‌ ಮಾಡಿದ್ದಾರೆ ಎಂದು ದೂರಿದರು.

ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳಿಗೆ, ರೈತರ ಕುರಿತು ಕೀಳಾಗಿ ಮಾತನಾಡುವವರಿಗೆ ಮಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲು ಪ್ರಮುಖ ಅಸ್ತ್ರವಾದ ಮತಗಳನ್ನು ಖಡ್ಗವಾಗಿಸಿಕೊಂಡು ಮನೆಗೆ ಕಳಿಸುವ ಕೆಲಸ ಮಾಡಲಾಗುವುದು ಎಂದು ಇದೇ ಸಂದರ್ಭ ಹೇಳಿದರು.ರೈತ ಸಂಘಟನೆಯ ಪ್ರಮುಖರಾದ ರಂಗಸ್ವಾಮಿ, ಸಿದ್ಧರಾಮಪ್ಪ ರಂಜಣಗಿ, ಅರವಿಂದ ಕುಲಕರ್ಣಿ, ಗೌಡಪ್ಪಗೌಡ ಮೈಗೂರ, ಜಯಶ್ರೀ ಜಂಗಮಶೆಟ್ಟಿ, ರಮೇಶ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.