ADVERTISEMENT

ಕೆ–ಸೆಟ್‌ ಪರೀಕ್ಷೆಗೆ 4,662 ಅಭ್ಯರ್ಥಿಗಳು

ವಿಜಾಪುರದ ಐದು ಕೇಂದ್ರಗಳಲ್ಲಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2013, 8:00 IST
Last Updated 7 ಡಿಸೆಂಬರ್ 2013, 8:00 IST

ವಿಜಾಪುರ: ಮೂರು ವರ್ಷಗಳ ನಂತರ ನಡೆಯುತ್ತಿರುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (ಕೆ–ಸೆಟ್‌) ವಿಜಾಪುರ ಮತ್ತು ಬಾಗಲ ಕೋಟೆ ಜಿಲ್ಲೆಗಳ 4,662 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇದೇ 8ರಂದು ಬೆಳಿಗ್ಗೆ 9.30ರಿಂದ ಸಂಜೆ 4ರ ವರೆಗೆ ವಿಜಾಪುರದ ಐದು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವರ್ಷದಲ್ಲಿ ಎರಡು ಬಾರಿ ‘ರಾಷ್ಟ್ರೀಯ ಉಪನ್ಯಾಸ ಕರ ಅರ್ಹತಾ ಪರೀಕ್ಷೆ (ನೆಟ್‌) ಸಂಘಟಿಸುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ ನಡೆಯುತ್ತಿದೆ. ಕೆ–ಸೆಟ್‌ ಪರೀಕ್ಷೆಗೆ ಮೈಸೂರು ವಿಶ್ವವಿದ್ಯಾಲಯ ನೋಡಲ್‌ ಏಜೆನ್ಸಿಯಾಗಿದ್ದು, ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಾಪುರ, ದಾವ ಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು ಕೇಂದ್ರಗಳಲ್ಲಿ ನಡೆಯುವ ಪರೀಕ್ಷೆಗೆ 83,400 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
‘ಕೆ–ಸೆಟ್‌ ಪರೀಕ್ಷೆಯಲ್ಲಿ (32 ವಿಷಯಗಳು) ನಿಗದಿತ ಅಂಕ ಗಳಿಸಿದರೆ ಉತ್ತೀರ್ಣ ಎಂದು ಪರಿಗಣಿಸುವುದಿಲ್ಲ. ಒಟ್ಟು ಅಭ್ಯರ್ಥಿಗಳ ಪೈಕಿ ಶೇ.15ರಷ್ಟು ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆಯುತ್ತಾರೆ. ಯಾರು ಅತಿ ಹೆಚ್ಚು ಅಂಕ ಪಡೆಯುತ್ತಾರೋ ಅವರು ಅರ್ಹ ತೆಯ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳು ತ್ತಾರೆ’ ಎಂಬುದು ಕೆ–ಸೆಟ್‌ನ ವಿಜಾ ಪುರ ಕೇಂದ್ರದ ನೋಡಲ್‌ ಅಧಿಕಾರಿ, ಇಲ್ಲಿಯ ಮಹಿಳಾ ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದ ಡೀನ್‌ ಡಾ.ಶಿವಕುಮಾರ ಬಿ. ಮಾಡಗಿ ಅವರ ವಿವರಣೆ.

‘ಕೆ–ಸೆಟ್‌ ಪರೀಕ್ಷೆ ಪಾಸ್‌ ಆದ ಅಭ್ಯರ್ಥಿಗಳು ವಿಶ್ವವಿದ್ಯಾಲಯ, ಕಾಲೇಜು, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆ ಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕಾತಿ ಹೊಂದಲು  ಅರ್ಹತೆ ಪಡೆ ಯುತ್ತಾರೆ. ನಮ್ಮ ರಾಜ್ಯದ ಜೊತೆಗೆ ಹೊರ ರಾಜ್ಯದ ಹುದ್ದೆಗಳಿಗೂ ಅವರು ಅರ್ಹರು. ಆದರೆ, ಆ ರಾಜ್ಯಗಳ ನಿಯಮಗಳು ಅದಕ್ಕೆ ಅವಕಾಶ ನೀಡ ಬೇಕಷ್ಟೇ’ ಎನ್ನುತ್ತಾರೆ ಅವರು.

‘ಮೂರು ವರ್ಷಗಳ ನಂತರ ಪರೀಕ್ಷೆ ನಡೆಯುತ್ತಿರುವುದರಿಂದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಮುಂದಿನ ಮೂರು ವರ್ಷಗಳ ಕಾಲ ಪ್ರತಿ ವರ್ಷವೂ ಕೆ–ಸೆಟ್‌ ಪರೀಕ್ಷೆ ಸಂಘಟಿಸಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿದೆ’ ಎಂದು ಅವರು ಹೇಳಿದರು.

ಕನ್ನಡಕ್ಕೆ ಹೆಚ್ಚು: ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯನ್ನೊಳಗೊಂಡ ವಿಜಾಪುರ ನೋಡಲ್‌ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಕನ್ನಡ ವಿಷಯದವರೇ (755) ಹೆಚ್ಚಾಗಿದ್ದಾರೆ. ಇತಿಹಾಸ–477, ಇಂಗ್ಲಿಷ್‌–285, ಉರ್ದು–40, ಸಂಸ್ಕೃತ–3, ಹಿಂದಿ–172 ಜನ ಅರ್ಜಿ ಸಲ್ಲಿಸಿದ್ದಾರೆ. ಜನಪದ ಅಧ್ಯ ಯನ, ಪ್ರವಾಸೋದ್ಯಮ ವಿಷಯಗಳಿಗೆ ತಲಾ ಒಬ್ಬ ಅಭ್ಯರ್ಥಿ ಮಾತ್ರ ಇದ್ದಾರೆ.

ಸಿದ್ಧತೆ: ವಿಜಾಪುರದ ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜು, ಬಿಎಲ್‌ಡಿಇ ಸಂಸ್ಥೆಯ ಜೆಎಸ್‌ಎಸ್‌ ಶಿಕ್ಷಣ ಮಹಾವಿದ್ಯಾಲಯ, ಇದೇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜು, ಅಂಜುಮನ್‌ ಸಂಸ್ಥೆಯ ಪದವಿ ಕಾಲೇಜು, ಅಂಜುಮನ್‌ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರೀಕ್ಷೆ ನಡೆಯಲಿದೆ. ಪ್ರತಿ ಕೇಂದ್ರಕ್ಕೆ ಮೂವರು ಉಸ್ತುವಾರಿ ಅಧಿಕಾರಿಗಳು,  ಮುಖ್ಯ ಅಧೀಕ್ಷಕರು, ತಲಾ ಇಬ್ಬರು ಉಪ ಅಧೀಕ್ಷಕರು ಇರಲಿದ್ದಾರೆ. 168 ಜನ ಕೊಠಡಿ ಮೇಲ್ವಿಚಾರಕರು ಸೇರಿದಂತೆ 350 ಜನ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಮಾಡಗಿ ಹೇಳಿದರು.

ಪ್ರವೇಶ ಪತ್ರ, ಗುರುತು ಪತ್ರ ತನ್ನಿ
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಒಂದೊಮ್ಮೆ ಪ್ರವೇಶ ಪತ್ರ ಇಲ್ಲದಿ ದ್ದರೆ ವಾಹನ ಚಾಲನಾ ಪರವಾನಿಗೆ ಪತ್ರ, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ... ಭಾವಚಿತ್ರ ವಿರುವ ಅಧಿಕೃತ ದಾಖಲೆಯೊಂದನ್ನು ಕಡ್ಡಾಯ ವಾಗಿ ತರಬೇಕು. ಅವುಗಳನ್ನು ಮಾನ್ಯಮಾಡುತ್ತೇವೆ ಎಂದು ನೋಡಲ್‌ ಅಧಿಕಾರಿ ಡಾ.ಶಿವ ಕುಮಾರ ಮಾಡಗಿ ತಿಳಿಸಿದರು.

ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಮತ್ತಿತರ ನಿಷೇಧಿತ ಉಪಕರಣ ತರುವಂತಿಲ್ಲ. ಅಭ್ಯರ್ಥಿಗಳು ಬೆಳಿಗ್ಗೆ 9ರ ಒಳಗಾಗಿ ಪರೀಕ್ಷಾ ಕೊಠಡಿ ಯಲ್ಲಿ ಇರಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕ್ಯಾಂಟೀನ್‌ ಗಳು ತೆರದಿರುತ್ತವೆ ಎಂದರು.
ಪರೀಕ್ಷೆ–ಪರೀಕ್ಷಾ ಕೇಂದ್ರಗಳ  ಮಾಹಿತಿಗೆ ಸಂಪರ್ಕಿಸಿ: http:// kset.uni.mysore.ac.in

ಯಾವ ವಿಷಯದ ಪರೀಕ್ಷೆ ಎಲ್ಲಿ?
ಎಸ್‌.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜು: ಕನ್ನಡ, ಇತಿಹಾಸ, ಸಮಾಜಶಾಸ್ತ್ರ, ಅಪರಾಧಶಾಸ್ತ್ರ.

ಬಿಎಲ್‌ಡಿಇ ಸಂಸ್ಥೆಯ ಜೆ.ಎಸ್‌.ಎಸ್‌. ಶಿಕ್ಷಣ ಮಹಾವಿದ್ಯಾಲಯ: ವಾಣಿಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನೋವಿಜ್ಞಾನ, ಸಾರ್ವಜನಿಕ ಆಡಳಿತ.

ಬಿಎಲ್‌ಡಿಇ ಬಂಗಾರಮ್ಮ ಸಜ್ಜನ ಮಹಿಳಾ ಪದವಿ ಕಾಲೇಜು: ಶಿಕ್ಷಣ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಕಾನೂನು, ಸಂಸ್ಕೃತ, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್‌ ಸೈನ್ಸ್‌.

ಅಂಜುಮನ್‌ ಪದವಿ ಕಾಲೇಜು: ಇಂಗ್ಲೀಷ್‌, ರಾಜ್ಯ ಶಾಸ್ತ್ರ, ಭೂಗೋಳ, ಪ್ರವಾಸೋದ್ಯಮ, ಪತ್ರಿಕೋದ್ಯಮ, ಸಮಾಜ ಕಾರ್ಯ, ದೈಹಿಕ ಶಿಕ್ಷಣ, ಉರ್ದು, ದೈಹಿಕ ವಿಜ್ಞಾನ (ಫಿಜಿಕಲ್‌ ಸೈನ್ಸ್‌), ಗಣಿತ, ಜೀವ ವಿಜ್ಞಾನ (ಲೈಫ್‌ ಸೈನ್ಸ್‌), ಪರಿಸರ ವಿಜ್ಞಾನ.

ಅಂಜುಮನ್‌ ಬಿ.ಎಡ್‌ ಕಾಲೇಜು: ಹಿಂದಿ, ಮ್ಯಾನೇಜ್‌ಮೆಂಟ್‌, ಜನಪದ ಅಧ್ಯಯನ, ರಸಾಯನ ವಿಜ್ಞಾನ. (ನೋಡಲ್‌ ಕೇಂದ್ರ  ನೀಡಿರುವ ಮಾಹಿತಿ).

ವೇಳಾಪಟ್ಟಿ
ಪತ್ರಿಕೆ–1 ಬೆಳಿಗ್ಗೆ 9.30ರಿಂದ 10.45.

ADVERTISEMENT

ಪತ್ರಿಕೆ–2 ಬೆಳಿಗ್ಗೆ 10.45ರಿಂದ ಮಧ್ಯಾಹ್ನ 12.
ಪತ್ರಿಕೆ–3 ಮಧ್ಯಾಹ್ನ 1.30ರಿಂದ 4ರ ವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.