ADVERTISEMENT

ಕೊಳೆಗೇರಿ ನಿವಾಸಿಗಳ ಧರಣಿ ಎರಡನೇ ದಿನಕ್ಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 9:40 IST
Last Updated 2 ಜೂನ್ 2011, 9:40 IST

ವಿಜಾಪುರ: ಕೊಳೆಗೇರಿಗಳಲ್ಲಿ ವಾಸಿಸುತ್ತಿ ರುವವರಿಗೆ ನಿವೇಶನಗಳ ಹಕ್ಕುಪತ್ರ ನೀಡಿ ನಾಗರಿಕ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ ಎರಡನೆಯ ದಿನಕ್ಕೆ ಕಾಲಿಟ್ಟಿದೆ.

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್, ಜನವಾದಿ ಮಹಿಳಾ ಸಂಘ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಹಾಗೂ ಇತರ ಸಂಘಟನೆಯವರು ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮಂಗಳವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ವೃದ್ಧರು, ಅಂಗವಿಕಲರು ಹಾಗೂ ವಿಧವೆಯರಿಗೆ ಮಾಶಾಸನ ನೀಡುವ ಅರ್ಜಿ ಸ್ವೀಕರಿಸುವುದನ್ನು ನಿಲ್ಲಿಸಲಾಗಿದೆ. ಅದನ್ನು ತಕ್ಷಣವೇ ಪ್ರಾರಂಭಿಸಬೇಕು. ನಗರದ ಸ್ಲಂಗಳ ನಿವಾಸಿಗಳನ್ನು ತೆರವುಗೊಳಿಸಲು ನಗರಸಭೆ ಮುಂದಾಗಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಮುಖಂಡ ಭೀಮಶಿ ಕಲಾದಗಿ ಒತ್ತಾಯಿಸಿದರು.

ಇಲ್ಲಿಯ ಕಂಜರಬಾಟ ಕಾಲೋನಿ, ವಜ್ರಹನುಮಾನ ನಗರ, ಅಂಬೇಡ್ಕರ ಕಾಲೋನಿಗಳ ಸ್ಲಂಗಳಲ್ಲಿ ವಾಸಿಸುತ್ತಿ ರುವವರಿಗೆ ಹಕ್ಕು ಪತ್ರ ವಿತರಿಸಿ ಅವರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಮುಸ್ಲಿಂ ಕಾನೂನಿನಂತೆ ಗುಂಟಾ ಪ್ಲಾಟ್ ನೋಂದಣಿ ಆರಂಭಿಸಬೇಕು ಎಂದು ಮನ್ನುಸಾಬ ಕಲಾದಗಿ ಆಗ್ರಹಿಸಿದರು.

ಮಾಸಾಶನದಲ್ಲಿ ಅಕ್ರಮವೆಸಗಿದ್ದರೆ ಅವರಿಗೆ ಶಿಕ್ಷೆ ನೀಡಿ. ಆದರೆ, ನಿಜವಾದ ಅರ್ಹರಿಗೆ ಮಾಶಾಸನ ನೀಡದೇ ಇರುವುದು ಸರಿಯಲ್ಲ ಎಂದು ಸುರೇಖಾ ರಜಪೂತ ಹೇಳಿದರು.

ಅಣ್ಣಾರಾಯ ಈಳಗೇರ, ವಿ.ಎಂ. ಸೊನ್ನದ ಮಾತನಾಡಿ, ಪಡಿತರ ವ್ಯವಸ್ಥೆ ಸರಿಪಡಿಸಬೇಕು. ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಗೆ ಸರ್ಕಾರಿ ಆದೇಶದಂತೆ 4600 ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.

ತಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾ ಆಡಳಿತ ಗಮನ ಹರಿಸಿ ತಕ್ಷಣ ಅಧಿಕಾರಿಗಳ ಸಭೆ ಕರೆಯಬೇಕು. ಈಗಾಗಲೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಾರ್ವಜನಿಕರ ಅರ್ಜಿಗಳನ್ನು ಎಂಟು ದಿನಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಈ ಸೂಚನೆಗಾದರೂ ಬೆಲೆ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಪ್ರಮುಖರಾದ ವಿ.ಎಚ್. ಹೊನ್ನುಟಗಿ, ಮಹೆಬೂಬ ನದಾಫ್, ಸಿದ್ರಾಮ, ರೇವಣಸಿದ್ಧ ಬಣಗಾರ, ಬಂಗಾರಿ ಧನಪಾಲ ಬಾಗಡೆ, ರಾಖೇಶ್ ಬಾಗಡೆ, ಶಾಂತಿ, ಮೀನಾ, ಸವಿತಾ, ಮುನ್ನಿಬಾಯಿ, ನಿರ್ಮಲಾ, ಸುಶೀಲಾ, ಜಯಸಿಂಗ್, ಸೋಮಪ್ಪ ಆಯಟ್ಟಿ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.