ADVERTISEMENT

ಖರೀದಿ ಸ್ಥಗಿತ; ಬೆಳೆಗಾರ ಚಿಂತಾಕ್ರಾಂತ

ಡಿ.ಬಿ, ನಾಗರಾಜ
Published 27 ಫೆಬ್ರುವರಿ 2018, 8:33 IST
Last Updated 27 ಫೆಬ್ರುವರಿ 2018, 8:33 IST
ಬಸವನಬಾಗೇವಾಡಿ ಪಟ್ಟಣದ ಎಪಿಎಂಸಿ ಆವರಣದ ಖರೀದಿ ಕೇಂದ್ರದ ಬಳಿ ಸೋಮವಾರ ಮುಂಜಾನೆಯೂ ನಿಂತಿದ್ದ ತೊಗರಿ ತುಂಬಿದ ಟ್ರ್ಯಾಕ್ಟರ್‌ಗಳು
ಬಸವನಬಾಗೇವಾಡಿ ಪಟ್ಟಣದ ಎಪಿಎಂಸಿ ಆವರಣದ ಖರೀದಿ ಕೇಂದ್ರದ ಬಳಿ ಸೋಮವಾರ ಮುಂಜಾನೆಯೂ ನಿಂತಿದ್ದ ತೊಗರಿ ತುಂಬಿದ ಟ್ರ್ಯಾಕ್ಟರ್‌ಗಳು   

ವಿಜಯಪುರ: ಸರ್ಕಾರದ ಸೂಚನೆಯಂತೆ ಎರಡನೇ ಬಾರಿಯೂ ಆರಂಭಗೊಂಡಿದ್ದ ತೊಗರಿ ಖರೀದಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಜಿಲ್ಲೆಯ ರೈತರು ಚಿಂತೆಗೆ ಒಳಗಾಗಿದ್ದಾರೆ. ಜಿಲ್ಲೆಯ ವ್ಯಾಪ್ತಿಯಲ್ಲಿ 95 ಖರೀದಿ ಕೇಂದ್ರಗಳು ಸ್ಥಗಿತಗೊಂಡ ಬೆನ್ನಿಗೆ, ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಧಾರಣೆ ಪಾತಾಳಮುಖಿಯಾಗಿ ಕುಸಿದಿದೆ. ಮೂರ್ನಾಲ್ಕು ದಿನದ ಹಿಂದಷ್ಟೇ ಕ್ವಿಂಟಲ್‌ಗೆ ₹ 4100–4200ರ ಧಾರಣೆ ಯಲ್ಲಿ ಬಿಕರಿಯಾಗುತ್ತಿದ್ದ ತೊಗರಿ ಇದೀಗ ₹ 3700ರ ಆಸುಪಾಸಿಗೆ ಖರೀದಿಯಾಗುತ್ತಿದೆ.

ಬಹುತೇಕ ಖರೀದಿ ಕೇಂದ್ರಗಳು ಬೀಗ ಹಾಕಿವೆ. ಇನ್ನೂ ಹಲ ಕೇಂದ್ರಗಳ ಮುಂಭಾಗ ರೈತರು ಆಶಾ ಭಾವನೆಯಿಂದ ಸರ್ಕಾರ ತೊಗರಿ ಉತ್ಪನ್ನವನ್ನು ಖರೀದಿಸಲಿದೆ ಎಂಬ ನಿರೀಕ್ಷೆಯಿಂದ, ತೊಗರಿ ತುಂಬಿದ ಟ್ರ್ಯಾಕ್ಟರ್‌ಗಳೊಂದಿಗೆ ವಾಸ್ತವ್ಯ ಹೂಡಿರುವ ಚಿತ್ರಣವೂ ಜಿಲ್ಲೆಯ ವಿವಿಧೆಡೆ ಗೋಚರಿಸುತ್ತಿದೆ.

‘ಜಿಲ್ಲೆಯ ವ್ಯಾಪ್ತಿಯಲ್ಲಿ 78,607 ತೊಗರಿ ಬೆಳೆಗಾರರು ಬೆಂಬಲ ಬೆಲೆಯಡಿ ಮಾರಾಟಕ್ಕಾಗಿ ವಿವಿಧ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಿದ್ದರು. ಮೊದಲ ಹಂತದಲ್ಲಿ ಪ್ರತಿ ರೈತರಿಂದ 20 ಕ್ವಿಂಟಲ್‌, ಎರಡನೇ ಹಂತದಲ್ಲಿ 10 ಕ್ವಿಂಟಲ್‌ನಂತೆ ಒಟ್ಟು 41,484 ರೈತರಿಂದ, 5,34,847 ಕ್ವಿಂಟಲ್ ತೊಗರಿಯನ್ನು ಈಗಾಗಲೇ ಖರೀದಿಸಲಾಗಿದೆ’ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ ಡಿ.ಚಬನೂರ ತಿಳಿಸಿದರು.

ADVERTISEMENT

‘ಇನ್ನೂ 37,123 ರೈತರ ಬಳಿ ತೊಗರಿ ಉತ್ಪನ್ನ ಖರೀದಿಸಬೇಕಿದೆ. ಸರ್ಕಾರದ ಖರೀದಿಯ ಗುರಿ ಪೂರ್ಣಗೊಂಡಿದ್ದರಿಂದ ಪ್ರಕ್ರಿಯೆ ನಿಲ್ಲಿಸುವಂತೆ ಸೂಚನೆ ಬಂದಿದೆ. ಅದರಂತೆ ಖರೀದಿ ಸ್ಥಗಿತಗೊಂಡಿದೆ. ರೈತರ ದಾಖಲೆ ಸಲ್ಲಿಸಿದ ಐದು ಸೊಸೈಟಿಯ 200 ಬೆಳೆಗಾರರ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ’ ಎಂದು ಅವರು ಹೇಳಿದರು.

‘ಮೂರ್ನಾಲ್ಕು ದಿನದ ಹಿಂದೆ ಬಸವನಬಾಗೇವಾಡಿ ಎಪಿಎಂಸಿ ಆವರಣದ ಖರೀದಿ ಕೇಂದ್ರದಲ್ಲಿ ತೊಗರಿ ತುಂಬಿಕೊಳ್ಳುವ ಚೀಲ ಖಾಲಿಯಾಗಿವೆ ಎಂಬ ನಾಮಫಲಕ ತೂಗಿ ಹಾಕಿ ಖರೀದಿ ಸ್ಥಗಿತಗೊಳಿಸಿದ್ದರು. ಊರಿನಿಂದ ಟ್ರ್ಯಾಕ್ಟರ್‌ ಬಾಡಿಗೆ ಪಡೆದು ತೊಗರಿ ತುಂಬಿಕೊಂಡು ಇಲ್ಲಿಗೆ ಬಂದಿದ್ದೇವೆ. ಇಂದು–ನಾಳೆ ಖರೀದಿಸಬಹುದು ಎಂಬ ನಿರೀಕ್ಷೆಯಲ್ಲೇ ದಿನ ಕಳೆದಿದ್ದೇವೆ. ಆದರೆ ಇಲ್ಲಿಯವರೆಗೂ ಯಾರೊಬ್ಬರೂ ನಮ್ಮತ್ತ ಸುಳಿದಿಲ್ಲ. ಮಾಹಿತಿ ನೀಡಿಲ್ಲ. ಹೊಲ–ಮನೆ ಕೆಲಸ ಬಿಟ್ಟು ಇಲ್ಲಿ ಬೀಡು ಬಿಟ್ಟಿದ್ದೇವೆ.

ಊರಿಂದ ನಿತ್ಯ ಬುತ್ತಿ ತರಿಸಿಕೊಂಡು ಊಟ ಮಾಡುತ್ತಿದ್ದೇವೆ. ಒಂದು ದಿನ ಕಳೆದಂತೆ ಟ್ರ್ಯಾಕ್ಟರ್‌ ಬಾಡಿಗೆ ಏರುತ್ತಿದೆ. ಏನು ಮಾಡಬೇಕು ಎಂಬುದೇ ತೋಚದಾಗಿದೆ’ ಎಂದು ಟಕ್ಕಳಕಿಯ ಗುರುಪಾದಪ್ಪಗೌಡ ಬಿರಾದಾರ, ಬಸವನಹಟ್ಟಿಯ ಬಸವರಾಜ ಡೊಮನಾಳ, ಬಸವನ ಬಾಗೇವಾಡಿಯ ಬಸವರಾಜ ಹೊಕ್ರಾಣಿ ತಮ್ಮ ಅಳಲು ಹೇಳಿಕೊಂಡರು. ‘ಸರ್ಕಾರ ತೊಗರಿ ಖರೀದಿಸುತ್ತದೆ ಎಂಬ ನಂಬಿಕೆಯಿಂದ ನಿಶ್ಚಿಂತೆಯಿಂದ ಮನೆಯಲ್ಲಿ ಇದ್ದೆವು. ಇದೀಗ ಏಕಾಏಕಿ ಸ್ಥಗಿತದ ಆದೇಶ ಹೊರಬಿದ್ದಿದೆ. ಇದು ರೈತರ ಪಾಲಿಗೆ ಬರಸಿಡಿಲಂತಾಗಿದೆ. ನಾವು ಪಾಳಿ ಹಚ್ಚಿ ಹೆಸರು ಬರೆಸಿದ್ದೆವು. ಇದೀಗ ಖರೀದಿಸದಿದ್ದರೆ ನಮ್ಮ ಸ್ಥಿತಿ ಭಾಳ ಹೈರಾಣ ಆಗಲಿದೆ’ ಎಂದು ತಾಂಬಾ ಸಮೀಪದ ಸುರಗಿಹಳ್ಳಿಯ ಕಾಂತನಗೌಡ ಪಾಟೀಲ ತಿಳಿಸಿದರು.

* * 

ತೊಗರಿ ಖರೀದಿ ಕೇಂದ್ರಗಳಲ್ಲಿ ಖರೀದಿ ಸ್ಥಗಿತಗೊಳ್ಳುತ್ತಿದ್ದಂತೆ, ಮುಕ್ತ ಮಾರುಕಟ್ಟೆಯಲ್ಲಿ ಧಾರಣೆ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್‌ಗೆ ₹ 3700 ಇದೆ. ಮುಂದೇನು ಮಾಡಬೇಕು ಎಂಬುದೇ ತೋಚದಾಗಿದೆ
ಗುರುಪಾದಪ್ಪಗೌಡ ಬಿರಾದಾರ, ಟಕ್ಕಳಕಿ, ತೊಗರಿ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.