ADVERTISEMENT

ಗ್ರಾಮಗಳಲ್ಲಿ ನೈರ್ಮಲ್ಯದ ನಿರ್ಲಕ್ಷ್ಯ: ವಿಷಾದ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:05 IST
Last Updated 16 ಅಕ್ಟೋಬರ್ 2012, 6:05 IST
ಗ್ರಾಮಗಳಲ್ಲಿ ನೈರ್ಮಲ್ಯದ ನಿರ್ಲಕ್ಷ್ಯ: ವಿಷಾದ
ಗ್ರಾಮಗಳಲ್ಲಿ ನೈರ್ಮಲ್ಯದ ನಿರ್ಲಕ್ಷ್ಯ: ವಿಷಾದ   

ವಿಜಾಪುರ: ಗ್ರಾಮೀಣ ಜನರ ಜೀವನ ಪದ್ಧತಿಯಲ್ಲಿ ಸ್ವಚ್ಛತೆ ಅಥವಾ ನೈರ್ಮಲ್ಯ ಎಂಬುದು ಅತ್ಯಂತ ನಿರ್ಲಕ್ಷಿತ ವಿಷಯವಾಗಿದೆ ಎಂದು ಜಂಬಗಿ (ಆ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಸಿ. ಮೇತ್ರಿ ಹೇಳಿದರು.

ತಾಲ್ಲೂಕಿನ ಜಂಬಗಿ (ಆ) ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಕೈ ತೊಳೆದುಕೊಳ್ಳುವ ದಿನಾಚರಣೆಯಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಮಲ-ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಇದು ಅವಲಂಬನೆ ಮಾತ್ರವಲ್ಲದೆ ಅವರ ರೂಢಿಗತ ಅಭ್ಯಾಸವೂ ಆಗಿಬಿಟ್ಟಿದೆ. ಮಹಿಳೆಯರು ಬೆಳಗಿನ ಜಾವ ಬಯಲಿಗೆ ಹೋಗಿ ಬಂದು ನೀರು ಚಿಮುಕಿಸಿ ಕೊಂಡು ಅಡುಗೆ ಕೆಲಸಗಳಲ್ಲಿ ತೊಡಗಿ ಸಿಕೊಳ್ಳುತ್ತಾರೆ.
 
ಅದೇ ಕೈಯಿಂದ ತರಕಾರಿ ಹೆಚ್ಚುತ್ತಾರೆ. ಅಡುಗೆ ಪದಾರ್ಥ ಮುಟ್ಟುತ್ತಾರೆ. ಊಟವನ್ನೂ ಮಾಡುತ್ತಾರೆ. ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಗಳನ್ನು ಸೋಪಿನಿಂದ ಅಥವಾ ಬೂದಿಯಿಂದ  ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಸ್ವಚ್ಛತೆ ಕಾಪಾಡಬಹುದಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಸಿದ್ದು ಎಸ್. ಗೆರಡೆ, ಗ್ರಾಮೀಣ ಪರಿಸರದಲ್ಲಿ ಸ್ವಚ್ಛತೆಗೆ ಪಂಚಾಯಿತಿಗಳು ಹೆಚ್ಚಿನ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು, ಒಳಚರಂಡಿ ಮತ್ತು ನೈರ್ಮಲ್ಯ ಕಾಪಾಡುವಂತಹ ಔಷಧಿ ಸಿಂಪಡಿಸಬೇಕು. ಸಾರ್ವಜನಿಕರೂ ಸ್ವಚ್ಛತೆಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷ ಶರಣಬಸಪ್ಪ ಪೂಜಾರಿ, ಮಕ್ಕಳ ಕೈ ತೊಳೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗಪ್ಪ ನಾಗಠಾಣ, ಸಂಗಪ್ಪ ಗುದಳೆ, ಶಂಕ್ರೆಪ್ಪ ಹುಲ್ಲೂರ, ಬಸವರಾಜ ಉಕ್ಕಲಿ, ಗಂಗೂಬಾಯಿ ಹಚಡದ, ಮಲ್ಲಿಕಾರ್ಜುನ ಔರಸಂಗ ಮುಂತಾದವರು ಉಪಸ್ಥಿತರಿದ್ದರು.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಂಡೆಪ್ಪ ತೇಲಿ ಸ್ವಾಗತಿಸಿದರು, ಪ್ರಕಾಶ ಹಚಡದ ನಿರೂಪಿಸಿದರು. ಗೌಡಪ್ಪ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.