ಚಡಚಣ: ಇಲ್ಲಿಗೆ ಸಮೀಪದ ಹತ್ತಳ್ಳಿ, ಹೊಳೆ ಸಂಖ, ಉಮರಾಣಿ, ನಿವರಗಿ ರೇವತಗಾಂವ, ಶಿರಾಡೋಣ, ಉಮರಜ ಸೇರಿದಂತೆ ಭೀಮಾ ನದಿ ತೀರದ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಸಿಲುಕಿ ಸಾವಿರಾರು ಮರಗಳು ಧರೆಗುರುಳಿದವು.
ಅಲ್ಲದೇ ಕಟಾವಿಗೆ ಬಂದ ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ದ್ರಾಕ್ಷಿ ಬೆಳೆ ಹಾಗೂ ಜೋಳ, ಗೋಧಿ, ಕಡಲೆ ಹಾಗೂ ಇತರ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ.
ಸಿದ್ದಣ್ಣ ಬಿರಾದಾರ ಎಂಬುವವರ ಗದ್ದೆಯಲ್ಲಿನ 60 ನಿಂಬೆ ಮರಗಳು ಸಂಪೂರ್ಣ ಕಿತ್ತು ಹೋಗಿವೆ. ಅದೇ ರೀತಿ
ನಿವರಗಿ ಗ್ರಾಮದ ಅಶೋಕ ಕಾಶಿರಾಮ ಚವಾಣ ಅವರ ಸುಮಾರು 10 ಎಕರೆ ಪ್ರದೇಶದಲ್ಲಿನ ದ್ರಾಕ್ಷಿ ಸಂಪೂರ್ಣ ಕಿತ್ತು ಹೋಗಿದೆ. ಹತ್ತಳ್ಳಿ ಗ್ರಾಮದಲ್ಲಿ ಬೀಸಿದ ಬಿರುಗಾಳಿಗೆ ಸಿಲುಕಿ ನಾಲ್ಕು ಮನೆಗಳ ಪತ್ರಾಸ್ ಗಳು ಹಾರಿಹೋಗಿವೆ. ಬಸ್ ನಿಲ್ದಾಣದ ಪಕ್ಕದಲ್ಲಿ ಮರ ಉರುಳಿದ್ದರಿಂದ ಸೋಲಾಪುರ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ರೇವತಗಾಂವ ಅಡವಿ ವಸ್ತಿಯಲ್ಲಿನ ನೂರಾರು ಗಿಡಗಳು, ಅಡವಿ ವಸ್ತಿಯಲ್ಲಿನ ಪತ್ರಾಸ್‌ಗಳು ಕಿತ್ತು ಹೋಗಿವೆ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮು ಹಕ್ಕೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.