ADVERTISEMENT

ಜಾನುವಾರುಗಳಿಗೂ ಆಧಾರ್‌ ಸಂಖ್ಯೆ ಜೋಡಣೆ!

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:49 IST
Last Updated 22 ಸೆಪ್ಟೆಂಬರ್ 2017, 5:49 IST
ನಿಡಗುಂದಿ ಸಮೀಪದ ಬೇನಾಳದಲ್ಲಿ ಪಶುಗಳಿಗೆ ಹಾಕಲಾಗಿರುವ ವಿಶೇಷ ನಂಬರ್ ನ ಕಿವಿಯೋಲೆ
ನಿಡಗುಂದಿ ಸಮೀಪದ ಬೇನಾಳದಲ್ಲಿ ಪಶುಗಳಿಗೆ ಹಾಕಲಾಗಿರುವ ವಿಶೇಷ ನಂಬರ್ ನ ಕಿವಿಯೋಲೆ   

ನಿಡಗುಂದಿ: ಸರ್ಕಾರದ ವಿವಿಧ ಸಹಾಯ-ಸೌಲತ್ತುಗಳನ್ನು ಪಡೆಯಲು ಮತ್ತಿತರ ಕಾರ್ಯಗಳಿಗೆ ಪ್ರತಿಯೊಬ್ಬ ವ್ಯಕ್ತಿ ಹತ್ತು ಹಲವು ಕಡೆಗಳಲ್ಲಿ ಆಧಾರ್‌ ಸಂಖ್ಯೆ ಜೋಡಿಸುವುದು ಅನಿವಾರ್ಯ. ಆದರೆ ಕೇಂದ್ರ ಸರ್ಕಾರದ ಯೋಜನೆಯನ್ವಯ ಪ್ರತಿ ರಾಸುಗಳಿಗೂ 12 ಅಂಕಿಯ ಹೊಸ ಸಂಖ್ಯೆ ನೀಡುವುದರ ಜೊತೆಗೆ, ರಾಸಿನ ಮುಖ್ಯಸ್ಥನ ಆಧಾರ್‌ ಹಾಗೂ ಮೊಬೈಲ್ ಸಂಖ್ಯೆ ಜೋಡಿಸುವ ಕಾರ್ಯ ಆರಂಭಗೊಂಡಿದೆ.

ಏನಿದು ಯೋಜನೆ?: ಇಡೀ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಹೈನುಗಾರಿಕೆ ಆಗುತ್ತದೆ, ಎಷ್ಟು ಜಾನುವಾರುಗಳಿವೆ ಎಂಬಿತ್ಯಾದಿ ಮಾಹಿತಿ ಪಡೆಯಲು ‘ನ್ಯಾಷನಲ್ ಡೈರಿ ಡೆವೆಲೆಪ್‌ಮೆಂಟ್ ಬೋರ್ಡ’ ಪ್ರತಿ ರಾಸುಗಳ ಮಾಹಿತಿ ಕಂಡು ಹಿಡಿಯಲು ಆಧಾರ್‌ ರೀತಿ ಏಕೀಕೃತ ಸಂಖ್ಯೆ ನೀಡುತ್ತಿದೆ.

ಕೇಂದ್ರ ಸರ್ಕಾರ ಪೂರೈಕೆ ಮಾಡಿರುವ ಮೊದಲೇ ಮುದ್ರಿತಗೊಂಡಿರುವ 12 ಅಂಕಿಗಳುಳ್ಳ ಪಟ್ಟಿಯ ಕಿವಿಯೋಲೆಯನ್ನು ರಾಸುಗಳ ಕಿವಿಗೆ ಅಳವಡಿಸಲಾಗುತ್ತದೆ. ನಂತರ ಆ ರಾಸುಗಳ ಸದ್ಯದ ಸ್ಥಿತಿಗತಿ ಸೇರಿದಂತೆ ವಿವಿಧ ಮಾಹಿತಿ ಪಡೆದು ಅದನ್ನು ಕೇಂದ್ರ ನೀಡಿರುವ ವಿನೂತನ ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗುತ್ತದೆ. ಅಲ್ಲಿ ರಾಸುಗಳ ಮಾಲೀಕರ ಆಧಾರ್‌ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅದಕ್ಕೆ ಜೋಡಣೆ ಮಾಡಲಾಗುತ್ತದೆ. ಇದು ಇಡೀ ದೇಶಾದ್ಯಂತ ನಡೆಯುತ್ತಿರುವ ಪ್ರಕ್ರಿಯೆಯಾಗಿದೆ ಎಂದು ಪಶುವೈದ್ಯಾಧಿಕಾರಿ ಡಾ ಪಿ.ಎಸ್. ಸಂಖ ಹೇಳಿದರು.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಣ್ಣು ರಾಸುಗಳಿಗೆ (ಎಮ್ಮೆ ಮತ್ತು ಆಕಳು) ಮಾತ್ರ 12 ಅಂಕಿಯ ವಿಶೇಷ ನಂಬರ್ ನೀಡಿ, ಅದನ್ನು ಕಿವಿಗೆ ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಇನ್ನುಳಿದ ಪಶುಗಳಿಗೂ ಈ ರೀತಿಯ 12 ಅಂಕಿಗಳುಳ್ಳ ಕಿವಿಯೋಲೆ ಅಳವಡಿಸುವುದು ಮುಂದಿನ ವರ್ಷದಲ್ಲಿ ಬರಲಿದೆ ಎಂದೂ ಅವರು ಹೇಳಿದರು.

64,829 ರಾಸುಗಳು: ಬಸವನಬಾಗೇವಾಡಿ ತಾಲ್ಲೂಕಿನಲ್ಲಿ 42,018 ಆಕಳು ಹಾಗೂ 22,811 ಎಮ್ಮೆ ಸೇರಿದಂತೆ ಒಟ್ಟು 64,829 ರಾಸುಗಳಿಗೆ ಈ ವರ್ಷ ವಿಶೇಷ ನಂಬರ್ ಅಳವಡಿಸಿ ಆಧಾರ್‌ ಸಂಖ್ಯೆ ಜೋಡಿಸಲಾಗುತ್ತಿದೆ. ಸದ್ಯ ಶೇ 30ರಷ್ಟು ಗುರಿ ಸಾಧಿಸಲಾಗಿದೆ ಎಂದು ಬಸವನಬಾಗೇವಾಡಿ ತಾಲ್ಲೂಕು ಪಶು ಆರೋಗ್ಯಾಧಿಕಾರಿ ಡಾ. ಮಲ್ಲಿಕಾರ್ಜುನ ಹಂಚನಾಳ ತಿಳಿಸಿದರು.

ಪಶುಗೆ ಸಂಬಂಧಿಸಿದ ಯಾವುದೇ ಯೋಜನೆಯ ಫಲಾನುಭವಿಯಾಗಲು, ಪಶುವಿನ ಮೇಲೆ ಸಾಲ ತೆಗೆದುಕೊಳ್ಳಲು ಕೂಡಾ ಈ ನಂಬರ್ ನೀಡುವುದು ಇನ್ನೂ ಮುಂದೆ ಕಡ್ಡಾಯವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.