ADVERTISEMENT

ಜಿಲ್ಲೆಗೊಂದು ಜೈವಿಕ ಇಂಧನ ಮಾಹಿತಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 5:35 IST
Last Updated 25 ಜೂನ್ 2011, 5:35 IST
ಜಿಲ್ಲೆಗೊಂದು ಜೈವಿಕ ಇಂಧನ ಮಾಹಿತಿ ಕೇಂದ್ರ
ಜಿಲ್ಲೆಗೊಂದು ಜೈವಿಕ ಇಂಧನ ಮಾಹಿತಿ ಕೇಂದ್ರ   

ವಿಜಾಪುರ: ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಪ್ರತಿ ಜಿಲ್ಲೆಗೊಂದು ಜೈವಿಕ ಇಂಧನ ಮಾಹಿತಿ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಮಂಡಳಿಯ ಅಧ್ಯಕ್ಷ ವೈ.ಬಿ. ರಾಮಕೃಷ್ಣ ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಜೈವಿಕ ಇಂಧನ ಸಮಿತಿ ಸಭೆಯಲ್ಲಿ ಹಾಗೂ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ವಿಜಾಪುರ ಸೇರಿದಂತೆ ಒಂಬತ್ತು ಕಡೆಗಳಲ್ಲಿ ಈಗಾಗಲೆ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜುಲೈ ಅಂತ್ಯದ ವೇಳೆಗೆ ಮತ್ತೆ ಎಂಟು ಕೇಂದ್ರ ಗಳು ಕಾರ್ಯಾಚರಣೆ ಆರಂಭಿಸಲಿವೆ. ಈ ಆರ್ಥಿಕ ವರ್ಷದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಈ ಕೇಂದ್ರಗಳನ್ನು ಆರಂಭಿ ಸಲಾಗುತ್ತಿದೆ ಎಂದರು.

ತಮ್ಮ ಕಾರ್ಯಪಡೆಯ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಜೈವಿಕ ಇಂಧನ ನೀತಿ ರೂಪಿಸಿ ಅದನ್ನು ಅಳವಡಿ ಸಿಕೊಂಡ ಮೊದಲ ರಾಜ್ಯ ಕರ್ನಾಟಕ ವಾಗಿವೆ. ಇದು ವಿಶ್ವಕ್ಕೇ ಮಾದರಿ ಯಾಗಿದೆ. ರಾಜ್ಯದಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವಲ್ಲಿ ವಿಜಾಪುರ ಜಿಲ್ಲೆ ಮುಂಚೂಣಿಯಲ್ಲಿದೆ. ಇಲ್ಲಿಯ ಮಹಿಳಾ ವಿವಿಯಲ್ಲಿ ಸ್ಥಾಪಿಸಿ ರುವ ಮಾಹಿತಿ ಕೇಂದ್ರದಲ್ಲಿ ನೆರೆ ಜಿಲ್ಲೆಯವರ ಜೊತೆಗೆ ಮಹಾರಾಷ್ಟ್ರ ದವರೂ ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿ ಅಗತ್ಯ ಸಂಶೋಧನೆಯೂ ನಡೆಯುತ್ತಿದೆ ಎಂದು ಹೇಳಿದರು.

ವಿಜಾಪುರ ಜಿಲ್ಲೆಯಲ್ಲಿ ಕಳೆದ ವರ್ಷ 10 ಲಕ್ಷ ಜೈವಿಕ ಇಂಧನ ಸಸಿಗಳನ್ನು ನೆಡಲಾಗಿತ್ತು. ಈ ವರ್ಷ ವಿಜಾಪುರ ಜಿಲ್ಲೆಯೊಂದರಲ್ಲಿಯೇ 64 ಲಕ್ಷ ಗುಣ ಮಟ್ಟದ ಸಸಿಗಳನ್ನು ಬೆಳೆಯಲಾಗಿದ್ದು, ಅವುಗಳೆಲ್ಲವನ್ನೂ ಜಿಲ್ಲೆಯಲ್ಲಿ ಬೆಳೆಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 17 ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ 4ರಿಂದ 5 ಗ್ರಾಮ ಪಂಚಾಯಿತಿಗೆ ಒಂದರಂತೆ ಸ್ವಯಂ ಸೇವಾ ಸಂಸ್ಥೆಗಳನ್ನು ನೇಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ನಿರ್ಧ ರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದೊರೆಯುತ್ತಿರುವ ಹೊಂಗೆ ಬೀಜವನ್ನು ಸಂಗ್ರಹಿಸಿ ಮಹಿಳಾ ವಿಶ್ವವಿದ್ಯಾಲಯದ ಜೈವಿಕ ಇಂಧನ ಘಟಕಕ್ಕೆ ಪೂರೈಸಿದರೆ ಪ್ರತಿ ಕೆ.ಜಿ.ಗೆ 12 ರೂಪಾಯಿಯಂತೆ ಖರೀದಿಸ ಲಾಗುವುದು ಎಂದು ಹೇಳಿದರು.

ಗುಣಮಟ್ಟದ ಜೈವಿಕ ಇಂಧನ ಸಸಿಗಳ ಉತ್ಪಾದನೆಗೆ ಒತ್ತು ನೀಡಲಾ ಗಿದ್ದು, ಜಿಲ್ಲೆಯ ಸುಮಾರು 30 ಹೆಕ್ಟೇರ್ ಪ್ರದೇಶದಲ್ಲಿ ಇಂಥ ಸಸಿಗಳನ್ನು ಬೆಳೆಸಲಾ ಗುವುದು ಎಂದು ಹೇಳಿದರು.

ಜಿಲ್ಲಾ ಜೈವಿಕ ಇಂಧನ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿ.ಪಂ. ಸಿಇಓ ಎ.ಎನ್. ಪಾಟೀಲ, ಉಪ ವಿಭಾಗಾಧಿಕಾರಿ ಸುರೇಶ ಜಿರಲಿ,  ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.