ADVERTISEMENT

ತಂದೆ ತಾಯಿ ಋಣ ತೀರಿಸಲಾಗದು: ಹಿರೇಮಠ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 3:30 IST
Last Updated 24 ಸೆಪ್ಟೆಂಬರ್ 2011, 3:30 IST

ಮುದ್ದೇಬಿಹಾಳ: ಜನ್ಮ ಕೊಟ್ಟ ತಂದೆ ತಾಯಿ, ಬದುಕಲು ಆಸರೆ ನೀಡಿದ ಭೂಮಿ ತಾಯಿಯ ಋಣವನ್ನು ತೀರಿಸಲು ಮತ್ತೊಂದು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಸಾಹಿತಿ  ಪ್ರೊ.ಬಿ.ಎಂ.ಹಿರೇಮಠ ಹೇಳಿದರು.

ತಾಲ್ಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕವು ಲಿಂ.ಹುಚ್ಚಪ್ಪಗೌಡ ಬಸವಂತರಾಯ ನಾಡಗೌಡ್ರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆತ್ತವರ ಬಗ್ಗೆ ಮಕ್ಕಳಲ್ಲಿ  ಪ್ರೀತಿ ಕಡಿಮೆಯಾಗುತ್ತಿದೆ, ಪಿತೃ ಭಕ್ತಿ ಮೆರೆದ ಶ್ರವಣ, ರಾಮನ ಕಥೆಯ ದೃಷ್ಟಾಂತಗಳನ್ನು ನಾವು ಮರೆಯುವುದು ಸರಿಯಲ್ಲ. ತಾಲ್ಲೂಕು ಕೇಂದ್ರದಲ್ಲಿ ಒಂದು ಸಾಹಿತ್ಯ ಭವನವನ್ನು ಕಟ್ಟಿಸಿದರೆ ಅಲ್ಲಿ ನಿರಂತರ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲ ಆಗುತ್ತದೆ ಎಂದವರು ಹೇಳಿದರು.

ದತ್ತಿ ನಿಧಿ ಉಪನ್ಯಾಸ ನೀಡಿದ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ಸಕಲ ಜೀವಾತ್ಮರಲ್ಲಿ ದಯೆ, ಪ್ರೀತಿ, ಕರುಣೆ ತುಂಬಿ ಸರ್ವರನ್ನೂ ಪ್ರೀತಿಸುವಂತೆ ಮಾಡುವ ಗುಣ ಶರಣರ ವಚನಗಳಲ್ಲಿ ಅಡಗಿದೆ, ಯುವಕರು ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ಶರಣರ ವಚನಗಳನ್ನು ಅನುಸರಿಸಬೇಕು ಎಂದು ಹೇಳಿದರು.

ದತ್ತಿ ದಾನಿ ಎಸ್.ಎಚ್.ನಾಡಗೌಡ ಮಾತನಾಡಿ, ಹಿರಿಯರ ಆಶಯದಂತೆ ಪಟ್ಟಣದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಲು ಶಕ್ತಿ ಮೀರಿ ಯತ್ನಿಸುವುದಾಗಿ ಭರವಸೆ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್. ಪಾಟೀಲ, ಎಸ್.ಜಿ. ಬಿರಾದಾರ ಮಾತನಾಡಿದರು.

ಪವಾಡ ಬಸವೇಶ್ವರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ನಾಡಗೌಡ, ಸಿ.ಆರ್. ಬಂಗಾರಗುಂಡ, ಜಿ.ಎಸ್. ಸಜ್ಜನ, ಶ್ರೀಶೈಲ ಮೇಟಿ, ಪಲ್ಲೇದ, ಬಾಪುಗೌಡ ಬಿರಾದಾರ, ವೆಂಕಪ್ಪ ಕೊಣ್ಣೂರ, ಸೋಮನಗೌಡ ಬಿರಾದಾರ, ಎಂ.ಟಿ. ಪಾಟೀಲ, ಬಿ.ವೈ.ಲಿಂಗದಳ್ಳಿ, ಐ.ಕೆ.ಬೇಲಾಳ, ಬಿ.ಪಿ. ಯಾಳವಾರ, ಚಂದ್ರಶೇಖರ ಇಟಗಿ, ಎನ್.ಕೆ. ಬಿರಾದಾರ, ಶಾಂತಾ ಬಿರಾದಾರ, ರೇಣುಕಾ ಬಿರಾದಾರ, ರಮಾದೇವಿ ಬಿರಾದಾರ,  ಪಾಲ್ಗೊಂಡಿದ್ದರು. 

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್. ಕಲಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ಮಣಿ ನಿರೂಪಿಸಿದರು.  ಕಾರ್ಯದರ್ಶಿ ಎಸ್.ಬಿ.ಬಂಗಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.