ಮುದ್ದೇಬಿಹಾಳ: ಕುಟುಂಬಗಳಲ್ಲಿ ಮಹಿಳೆಯರ ಮೇಲೆ ಆಗುವ ದೌರ್ಜನ್ಯದಿಂದ ಪಾರಾಗುವ ವಿಧಾನ ಕುರಿತು ತಿಳಿವಳಿಕೆ ಮೂಡಿಸಲು, ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ಉಪಗೃಹ ಆಧಾರಿತ ತರಬೇತಿ ಹಾಗೂ ಮಾಹಿತಿ ಶಿಬಿರಕ್ಕೆ ಮುಖ್ಯವಾಗಿ ಆಗಮಿಸಬೇಕಿದ್ದ ಪೊಲೀಸ್ ಇಲಾಖೆ ಸಿಬ್ಬಂದಿ ಗೈರು ಹಾಜರಾಗುವ ಮೂಲಕ ತನ್ನ ಬೇಜವಾಬ್ದಾರಿ ಪ್ರದರ್ಶಿಸಿತು.
ಮಂಗಳವಾರ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆರು ಗಂಟೆಗಳ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಸಿ.ಡಿ.ಪಿ.ಒ. ಕಾರ್ಯಾಲಯ ಎಲ್ಲರಿಗೂ ಮಾಹಿತಿ ರವಾನಿಸಿತ್ತು. ತರಬೇತಿಯಲ್ಲಿ ಮಹಿಳೆಯರ ಮೇಲಾಗುವ ವಿವಿಧ ಹಂತದ ಶೋಷಣೆ, ಅದನ್ನು ತಪ್ಪಿಸಿಕೊಳ್ಳುವ ಬಗೆ, ದೌರ್ಜನ್ಯ ನಡೆದಾಗ ಯಾರಲ್ಲಿ ದೂರು ನೀಡಬೇಕು, ದೌರ್ಜನ್ಯಕ್ಕೆ ಕಡಿವಾಣ ಹಾಕುವ ಹಾಗೂ ವಿವಿಧ ಇಲಾಖೆಯವರಿಗೆ ಇರುವ ಹಕ್ಕುಗಳ ಮಾಹಿತಿ ಬಗ್ಗೆ ವಿವರಿಸಲಾಯಿತು. ತರಬೇತಿಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಸಾಂತ್ವನ ಕೇಂದ್ರ, ಗ್ರಾಮ ಪಂಚಾಯ್ತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ರಿಚ್ಸ್ ಸಂಸ್ಥೆಯವರು, ಮಹಿಳಾ ಶಕ್ತಿ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ತರಬೇತಿಯ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಹಾಯಕ ಸಿ.ಡಿ.ಪಿ.ಒ. ಸುಮಿತ್ರಾ ಸರಗಣಾಚಾರಿ, ಕುಟುಂಬಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದ್ದು ಮಹಿಳೆಯರು ಏನು ಮಾಡುವುದು ಎಂದು ತಿಳಿಯದೇ ಆತ್ಮಹತ್ಯೆಯಂತಹ ಕಾರ್ಯಕ್ಕೆ ಮುಂದಾಗುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರವು ಉಪಗ್ರಹ ಮೂಲಕ ದೌರ್ಜನ್ಯ ತಡೆಯುವ ಹಕ್ಕಿನ ಬಗ್ಗೆ ಹಾಗೂ ಕಾನೂನುಗಳ ಉಪಗ್ರಹ ತರಬೇತಿಯನ್ನು ನೀಡಲಾಗುತ್ತಿದೆ. ಶಿಬಿರದಲ್ಲಿ ಸಿಗುವ ಮಾಹಿತಿಯ ಅನುಷ್ಠಾನ ಪರಿಣಾಮಕಾರಿಯಾಗಿ ಮಾಡಿದರೆ ಶೇ.100ರಷ್ಟು ಮಹಿಳೆಯರ ಮೇಲಾಗುವ ದೌರ್ಜನ್ಯ ತಡೆಗಟ್ಟಬಹುದು ಎಂದು ವಿವರಿಸಿದರು.
ತರಬೇತಿಯಲ್ಲಿ ಅಂಗನವಾಡಿ ಮೇಲ್ವಿಚಾರಕರಾದ ಶೋಭಾ ಮುದಗಲ್ಲ, ಎಸ್.ಜಿ.ದೇಸಾಯಿ, ಜೋತಿ ಬಿರಾದಾರ, ರತ್ನಾ ಬೋರಣ್ಣವರ, ಶ್ಯಾಮಲಾ ಬಾಗೇವಾಡಿ, ಪಿ.ಎಸ್.ಅಗೀನಕೇರಿ, ಜೆ.ಕೆ.ಲಮಾಣಿ, ಗಿರಿಜಾ ಕಡಿ, ರೇಣುಕಾ ಹಳ್ಳೂರ ಮೊದಲಾದವರು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರ.ದ.ಸ. ಆರ್.ಕೆ.ರತ್ನಾಕರ ಸ್ವಾಗತಿಸಿ ವಂದಿಸಿದರು.
ಪೊಲೀಸರ ಉತ್ತರ
ತರಬೇತಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯೂ ಪಾಲ್ಗೊಳ್ಳದೇ ಇರುವ ಬಗ್ಗೆ ಪಿ.ಎಸ್.ಐ. ಅಂಬಿಗೇರ ಅವರನ್ನು ಮಾತನಾಡಿಸಿದಾಗ, ನಾನು ಸಾಕ್ಷಿಗೆಂದು ಗದುಗಿಗೆ ಬಂದಿದ್ದೇನೆ. ಹೀಗಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದರು. ಅಪಾಧ ಪಿ.ಎಸ್.ಐ. ಬಿ.ವ್ಹಿ. ನ್ಯಾಮಗೌಡ, ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆದಲ್ಲಿ ಬಂದೋಬಸ್ತ್ ಮಾಡಬೇಕಿತ್ತು. ಹೀಗಾಗಿ ಹಾಜರಾಗಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.