ADVERTISEMENT

ತಾರಾ ಪ್ರಚಾರಕರ ವೆಚ್ಚ ಅಭ್ಯರ್ಥಿ ಖಾತೆಗೆ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 12:37 IST
Last Updated 18 ಏಪ್ರಿಲ್ 2013, 12:37 IST

ವಿಜಾಪುರ: ಯಾವುದೇ ಪಕ್ಷ ಮತ್ತು ಅಭ್ಯರ್ಥಿಯ ಪರವಾಗಿ ತಾರಾ ಪ್ರಚಾ ರಕರು ಪ್ರಚಾರ ಮಾಡಿದರೆ ಅವರ ಅರ್ಧ  ಖರ್ಚಿನ ಲೆಕ್ಕ ಅಭ್ಯರ್ಥಿಯ ಖಾತೆಗೆ ಜಮೆ ಆಗುತ್ತದೆ!

`ಕಾಸಿಗಾಗಿ ಸುದ್ದಿ' ವಿಷಯದಲ್ಲಿ ಜಿಲ್ಲಾ ಮಟ್ಟದ ಸ್ಥಳೀಯ ದಿನಪತ್ರಿಕೆಗಳ ಸಂಪಾದಕರು, ವರದಿಗಾರರು,  ಕೇಬಲ್‌ಗಳ ಟಿವಿ ವರದಿಗಾರರು, ಮಾಲೀಕರ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು.

ತಾರಾ ಪ್ರಚಾರಕರ ವೆಚ್ಚದಲ್ಲಿ ಅರ್ಧ ಅಭ್ಯರ್ಥಿ ಖಾತೆಗೆ ಹಾಗೂ ಉಳಿದ ಅರ್ಧ ವೆಚ್ಚ ಪಕ್ಷದ ಲೆಕ್ಕಕ್ಕೆ ಜಮೆ ಮಾಡಲಾಗುವುದು ಎಂದರು.

ಕಾಸಿಗಾಗಿ ಸುದ್ದಿ ಮಾಡುವುದು, ನಿರಂತರವಾಗಿ ಯಾವುದೇ ಪಕ್ಷ, ಉಮೇದುವಾರರನ್ನು ವೈಭವೀಕರಿಸಿ ಸುದ್ದಿ ಮಾಡುವುದು ಚುನಾವಣಾ ಆಯೋಗದ ಆಕ್ಷೇಪಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಚುನಾವಣೆಗೆ ಸಂಬಂಧಿಸಿದ ಜಾಹೀರಾತು, ಕಾಸಿಗಾಗಿ ಸುದ್ದಿ ಪ್ರಕಟಣೆ, ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಪ್ರಚಾರ ಸಾಮಗ್ರಿಗಳ ಮುದ್ರಣದ ಪೂರ್ವದಲ್ಲಿ ಎಂ.ಸಿ.ಎಂ.ಸಿ. ಸಮಿತಿಯ ಪರಿಶೀಲನೆಗೆ ಒಪ್ಪಿಸಿ, ನಿಗದಿತ ಪ್ರಮಾಣಪತ್ರ ಪಡೆದು ಮುದ್ರಿಸಬೇಕು. ಅನುಮತಿ ಇಲ್ಲದೇ ಮುದ್ರಣ ಮಾಡಿದರೆ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.

ಯಾವುದೇ ಅಭ್ಯರ್ಥಿ ಪ್ರಚಾರ ಸಾಮಗ್ರಿ ಮುದ್ರಣ ಕುರಿತಂತೆ ಜಿಲ್ಲಾ ಮಟ್ಟದಲ್ಲಿರುವ ಎಂ.ಸಿ.ಎಂ.ಸಿ. ಸಮಿತಿಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ 24 ಗಂಟೆಯಲ್ಲಿ ಅನುಮತಿ ನೀಡುತ್ತದೆ. ಅನುಮತಿ ನೀಡಿಕೆ ಹಾಗೂ ನಿರಾಕರಣೆ ಕುರಿತಂತೆ ಜಿಲ್ಲಾ ಮಟ್ಟದ ಸಮಿತಿಯ ತೀರ್ಮಾನದ ಬಗ್ಗೆ ತಕರಾರುಗಳಿದ್ದರೆ ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿರುವ ಎಂ.ಸಿ.ಎಂ.ಸಿ. ಸಮಿತಿಗೆ ಮೇಲ್ಮನವಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಗೆ ಕಾನೂನಾತ್ಮಕವಾದ ಅಧಿಕಾರವಿದೆ. ಅನುಮತಿ ಪಡೆಯದ ಪ್ರಚಾರ ಸಾಮಗ್ರಿ ಮುದ್ರಣ, ಜಾಹೀರಾತು ಪ್ರಕಟಣೆ ಹಾಗೂ ಕಾಸಿಗಾಗಿ ಸುದ್ದಿ ಪ್ರಕಟವಾದರೆ ದೂರು ದಾಖಲಿಸಲಾ ಗುವುದು. ಪ್ರತಿ ದಿನ ಚುನಾವಣೆ ಲೆಕ್ಕ ವೀಕ್ಷಕರಿಗೆ ಪಕ್ಷ ಮತ್ತು ಅಭ್ಯರ್ಥಿಗಳ ಜಾಹೀರಾತು, ಕರಪತ್ರ ಮುದ್ರಣ     ಇತರ ವೆಚ್ಚಗಳ ಕುರಿತಂತೆ ಜಿಲ್ಲಾ ಸಮಿತಿ   ವರದಿ ಸಲ್ಲಿಸುತ್ತದೆ ಎಂದು    ಹೇಳಿದರು.

ಎಸ್.ಎಂ.ಎಸ್., ಆಕಾಶವಾಣಿ, ದೂರದರ್ಶನ, ಖಾಸಗಿ ಸುದ್ದಿ ವಾಹಿನಿ, ಸ್ಥಳೀಯ ಕೇಬಲ್ ಟಿವಿ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ ಗಳಿಗೆ ಪ್ರಚಾರ ಸಂದೇಶವನ್ನು ಬಿತ್ತರಿ ಸುವ ಮುನ್ನ ಸಮಿತಿಯ ಅನುಮತಿಗೆ ಪ್ರಚಾರದ ಮುದ್ರಿತ ಸಿಡಿ ಸಲ್ಲಿಸುವುದು ಕಡ್ಡಾಯ ಎಂದರು.

ನಿಯಮ ಮೀರಿ ಸುದ್ದಿ ಪ್ರಕಟಣೆ, ಪ್ರಚಾರ ಸಾಮಗ್ರಿ ಮುದ್ರಣ  ಮಾಡಿದರೆ ಸಮಿತಿಯು ಸಂಬಂಧಿಸಿದವರಿಗೆ ನೋಟಿಸ್ ಜಾರಿ ಮಾಡುತ್ತದೆ. ನೋಟಿಸ್ ಜಾರಿ ಮಾಡಿ 96 ಗಂಟೆ ಯೊಳಗೆ ಸ್ಪಷ್ಟನೆ ನೀಡದಿದ್ದರೆ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ ದೂರು ದಾಖಲಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯ ಸದಸ್ಯರಾದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಂಗೂಬಾಯಿ ಮಾನಕರ, ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಕ್ಷೇತ್ರ ಪ್ರಚಾರ ಅಧಿಕಾರಿ ಶಿವಾ ಮೇಸ್ತ್ರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.