ADVERTISEMENT

ತೊರವಿ ತಾಂಡಾದಲ್ಲಿ ಗುಂಪು ಘರ್ಷಣೆ: ಹಲವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 4:30 IST
Last Updated 21 ಜುಲೈ 2012, 4:30 IST

ವಿಜಾಪುರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಆರಂಭವಾದ ಘರ್ಷಣೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದರಿಂದ 10ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಇಲ್ಲಿಯ ತೊರವಿ ತಾಂಡಾದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಈ ಘರ್ಷಣೆಗೆ ಸಂಬಂಧಿಸಿದಂತೆ ಎರಡೂ ಗುಂಪುಗಳ 49 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, 15 ಜನರನ್ನು ಬಂಧಿಸಲಾಗಿದೆ. ಉಭಯ ಗುಂಪಿನ 10 ಜನ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ತಿಳಿಸಿದ್ದಾರೆ.

ತಾಂಡಾದಲ್ಲಿ ಮಂಗಳವಾರ ನಡೆದ ದೇವರ ಕಾರ್ಯಕ್ರಮದಲ್ಲಿಯ ಭಿನ್ನಾಭಿಪ್ರಾಯ ಹಾಗೂ ಮಹಿಳೆಯೊಬ್ಬರಿಗೆ ನೀರು ಸಿಡಿಸಿದ ಸಿಟ್ಟು ಈ ಘರ್ಷಣೆಗೆ ಕಾರಣ. ತಾಂಡಾದಲ್ಲಿ ಬಿಗಿ ಪೊಲೀಸ್ ಪಹರೆ ಹಾಕಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎಸ್ಪಿ ಹೇಳಿದ್ದಾರೆ.

ಈ ಘಟನೆಯ ನಂತರ ಇಡೀ ತಾಂಡಾ ಬಿಕೋ ಎನ್ನುತ್ತಿತ್ತು. ಕಲ್ಲು ತೂರಾಟ ನಡೆಸಿದ್ದರಿಂದ ತಾಂಡಾದ ಪ್ರವೇಶದ ರಸ್ತೆಯ ಮೇಲೆ ಸಾಕಷ್ಟು ಕಲ್ಲುಗಳು ಬಿದ್ದಿದ್ದವು. ಪುರುಷರೆಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದರೆ, ಮಹಿಳೆಯರು-ವೃದ್ಧರು ಮಾತ್ರ ಬಾಗಿಲು ಮುಚ್ಚಿಕೊಂಡು ಭಯಭೀ ರಾಗಿ ಮನೆಯಲ್ಲಿ ಕುಳಿತಿದ್ದರು.

`ಚಂದು ರೂಪಸಿಂಗ್ ರಾಠೋಡ ಎಂಬವರು ಪ್ರಕಾಶ ಫುಲಸಿಂಗ್ ರಾಠೋಡ ಹಾಗೂ ಇತರ 19 ಜನರ ವಿರುದ್ಧ ದೂರು ನೀಡಿದ್ದಾರೆ. ಅನಿಲ ಲೋಕು ರಾಠೋಡ ಎಂಬವರು ಚಂದು ರೂಪಸಿಂಗ್ ರಾಠೋಡ ಹಾಗೂ ಇತರ 29 ಜನರ ವಿರುದ್ಧ ದೂರು ನೀಡಿದ್ದಾರೆ. ವಿಜಾಪುರ ಗ್ರಾಮೀಣ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದು ಗುಂಪಿನಲ್ಲಿ 9, ಇನ್ನೊಂದರದಲ್ಲಿ 6 ಜನ ಆರೋಪಿಗಳನ್ನು ಬಂಧಿಸಲಾಗಿದೆ~ ಎಂದು ಗ್ರಾಮೀಣ ಸಿಪಿಐ ನಂದರೆಡ್ಡಿ ತಿಳಿಸಿದ್ದಾರೆ.

ಒಂದು ಗುಂಪಿನ ಮಾನಸಿಂಗ್ ತುಕಾರಾಮ ರಾಠೋಡ (30), ಗಜ್ಜು ರೇವು ರಾಠೋಡ (27), ಉಮೇಶ ಬಟ್ಟು ರಾಠೋಡ (28), ರಾಜು ಚಿನ್ನು ಲಮಾಣಿ (27), ಅನಿಲ ಫುಲಸಿಂಗ್ ನಾಯಕ (26), ಹಪ್ಪು ದೇಸು ರಾಠೋಡ (24), ಸುನೀಲ್ ಅಡಿವೆಪ್ಪ ನಾಯಕ (26), ನಾಗೇಶ ತಾರಾಸಿಂಗ ರಾಠೋಡ (27), ಅಶೋಕ ಲಚ್ಚು ಚವ್ಹಾಣ (30) ಹಾಗೂ ಇನ್ನೊಂದು ಗುಂಪಿನ  ದಾಕು ನಾರಾಯಣ ಜಾಧವ (32), ವಿಠ್ಠಲ ಸೇವು ಜಾಧವ (30), ಧನ್ನು ಸೇವು ಜಾಧವ (22), ಬಸು ಶಂಕರ ರಾಠೋಡ (26), ಶಿವಾಜಿ ಹರಿಸಿಂಗ್ ಜಾಧವ (26), ಪ್ರಕಾಶ ತುಳಸಾರಾಮ ನಾಯಕ (22) ಅವರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.