ADVERTISEMENT

`ದಾರಿತಪ್ಪಿಸುವ ಬುದ್ಧಿ ಜೀವಿಗಳಿಂದ ಎಚ್ಚರ'

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 6:19 IST
Last Updated 22 ಜುಲೈ 2013, 6:19 IST

ವಿಜಾಪುರ: `ಮಾಧ್ಯಮಗಳಿಗೆ ಸಮಾಜ ಪರಿವರ್ತಿಸುವ ಶಕ್ತಿ ಇದೆ. ಪತ್ರಕರ್ತರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಬೇಕು' ಎಂದು ವಾರ್ತಾ ಇಲಾಖೆಯ ನಿವೃತ್ತ ನಿರ್ದೇಶಕ ಮಲ್ಲಿಕಾರ್ಜುನ ಕೆಳಗಡೆ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

`ಸಮಾಜವನ್ನು ಅಜ್ಞಾನದಲ್ಲಿಯೇ ಮುಂದುವರೆಸಿಕೊಂಡು ಬರುವ ಹುನ್ನಾರ ಆದಿಕಾಲದಿಂದಲೂ ನಡೆದೇ ಇದೆ. ಭಗವಾನ ಬುದ್ಧರಿಂದ ಹಿಡಿದು ಇತ್ತೀಚಿನ ಅಣ್ಣಾ ಹಜಾರೆ ವರೆಗೂ ಮಹಾಪುರುಷರ ಉಪದೇಶ ಜನಸಾಮಾನ್ಯರ ಮೇಲೆ ಪ್ರಭಾವ ಬೀರದಂತೆ ಈ ಸ್ವಯಂಘೋಷಿತ ಬುದ್ಧಿಜೀವಿಗಳು, ಪಟ್ಟಭದ್ರ ಹಿತಾಸಕ್ತಿಗಳು ನೋಡಿಕೊಳ್ಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತರ ಮೇಲೆ ಬಹು ದೊಡ್ಡ ಹೊಣೆಗಾರಿಕೆ ಇದ್ದು, ಮಾನವೀಯತೆಯನ್ನು ಬೆಳೆಸಿ ಕೊಂಡು ಸಮಾಜ ತಿದ್ದುವ ಕಾರ್ಯ ಮಾಡಬೇಕು' ಎಂದರು.

`ಮಾಧ್ಯಮ ಮತ್ತು ವಾಸ್ತವಿಕತೆ' ಕುರಿತು ಉಪನ್ಯಾಸ ನೀಡಿದ ಪತ್ರಕರ್ತ ಜಿ.ಎನ್. ದೇಶಪಾಂಡೆ, `ಬದುಕಿನ ಅತಂತ್ರತೆ ಹೋಗಲಾಡಿಸಲು ಪತ್ರಕರ್ತ ರಿಗೆ ಸೇವಾ ಭದ್ರತೆ ಒದಗಿಸುವಲ್ಲಿ ಸರ್ಕಾರ ಗಮನ ಹರಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯಗಳು ಪತ್ರಕರ್ತರಿಗೂ ಸಿಗುವಂತಾಗಬೇಕು' ಎಂದು ಹೇಳಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಗೋಪಾಲ ನಾಯಕ, ಪತ್ರಕರ್ತರು ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ಗ್ರಾಮೀಣ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಶ್ರಿರಾಮ ಪಿಂಗಳೆ, ಪತ್ರಕರ್ತರು ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಮಾಡುವ ತಪ್ಪು ಗಳನ್ನು ಎತ್ತಿ ತೋರಿಸಬೇಕು. ನಿರ್ಭಯ ದಿಂದ ವರದಿ ಮಾಡಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಫೀ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು.

ಪತ್ರಕರ್ತರಾದ ವಿಜಾಪುರದ ಪದ್ಮಾಕರ ಆಪ್ಟೆ, ರಾಜು ಪಾಟೀಲ, ಇಂಡಿಯ ಶಿವಯ್ಯ ಹಿರೇಪಟ್ಟ, ಧನ್ಯ ಕುಮಾರ ಧನಶೆಟ್ಟಿ, ದೇವರ ಹಿಪ್ಪ ರಗಿಯ ಬಿ.ಸಿ. ಹಿರೇಮಠ, ಸಿಂದಗಿಯ ಇಂದುಶೇಖರ ಮಣೂರ, ಬಸವನ ಬಾಗೇವಾಡಿಯ ಪ್ರಕಾಶ ಬೆಣ್ಣೂರ, ನಿಡಗುಂದಿಯ ಸಂಗಮೇಶ ರೂಢಗಿ, ಮುದ್ದೇಬಿಹಾಳದ  ಡಿ.ಬಿ. ವಡವಡಗಿ, ತಾಳಿಕೋಟೆಯ ಜಿ.ಟಿ. ಘೋರ್ಪಡೆ ಅವರನ್ನು ಸನ್ಮಾನಿ ಸಲಾಯಿತು.

ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೀತಾರಾಮ ಕುಲಕರ್ಣಿ, ಜಿಲ್ಲಾ ಘಟಕದ ಕಾರ್ಯದರ್ಶಿ ರಾಜೆಂದ್ರ ಸರಾಫ್, ಜಿಲ್ಲಾ ಘಟಕದ ಉಪಾಧ್ಯಕ್ಷ ಟಿ.ಕೆ. ಮಲಗೊಂಡ, ಕೋಶಾಧ್ಯಕ್ಷ ಎಂ.ಎಂ. ಕುಂಬಾರ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕೊಂಡಗೂಳಿ ಸ್ವಾಗತಿಸಿದರು. ಇಂದುಶೇಖರ ಮಣೂರ ನಿರೂಪಿಸಿ ದರು.  ನಿಂಗಪ್ಪ ನಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.