ADVERTISEMENT

ದೊರೆ ಮನೆಗೆ ಬಂದರೂ ತಪ್ಪದ ನೀರಿನ ಬವಣೆ

ಗಣೇಶ ಚಂದನಶಿವ
Published 17 ಏಪ್ರಿಲ್ 2012, 5:45 IST
Last Updated 17 ಏಪ್ರಿಲ್ 2012, 5:45 IST
ದೊರೆ ಮನೆಗೆ ಬಂದರೂ ತಪ್ಪದ ನೀರಿನ ಬವಣೆ
ದೊರೆ ಮನೆಗೆ ಬಂದರೂ ತಪ್ಪದ ನೀರಿನ ಬವಣೆ   

ವಿಜಾಪುರ: ನಾಡಿನ ದೊರೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ (ಇದೇ 17ರಂದು) ಆಗಮನ ಬರದಿಂದ ತತ್ತರಿಸಿರುವ ಜಿಲ್ಲೆಯ ಜನತೆಯಲ್ಲಿ ಸಹಜವಾಗಿಯೇ ನಿರೀಕ್ಷೆಗಳನ್ನು ಹಿಟ್ಟಿಸಿದೆ.

`ಸಚಿವರು-ಪ್ರತಿಪಕ್ಷಗಳ ನಾಯಕರು ಬಂದು ಹೋದರೂ ನಾವು ಕೊಡ ನೀರಿಗಾಗಿ ಪರಿತಪಿಸುತ್ತಿರುವುದು ತಪ್ಪಿಲ್ಲ. ನಾಡಿನ ದೊರೆಯೇ ಈಗ ನಮ್ಮಲ್ಲಿಗೆ ಬರುತ್ತಿದ್ದಾರೆ. ಅವರ ಭೇಟಿಯ ನಂತರವಾದರೂ ನಮ್ಮ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಬಹುದೇ~ ಎಂದು ಪ್ರಶ್ನಿಸುತ್ತಿದ್ದಾರೆ ಜಿಲ್ಲೆಯ ಜನ.

ಜಿಲ್ಲೆಯ ಐದೂ ಜಿಲ್ಲೆಗಳನ್ನು ಸರ್ಕಾರ ಸಂಪೂರ್ಣ ಬರಪೀಡಿತ ಎಂದು ಘೋಷಿಸಿದೆ. ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಜಿಲ್ಲೆಯ ಗ್ರಾಮಗಳಲ್ಲಿ ಒಂದು ಸುತ್ತು ಹಾಕಿ ಬಂದರೆ ಬರದ ತೀವ್ರತೆಯಿಂದ ಜನತೆ ಎಷ್ಟು ನರಳುತ್ತಿದ್ದಾರೆ ಎಂಬುದರ ಮನವರಿಕೆಯಾಗುತ್ತದೆ. ಜನ ಗುಳೆ ಹೋಗುವುದು, ನೀರಿಗಾಗಿ ಊರುಗಳನ್ನೇ ತೊರೆಯುತ್ತಿರುವುದು ಮುಂದುವರೆದಿದೆ.

ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಜನರ ಬಾಯಾರಿಕೆಯೂ ಹೆಚ್ಚುತ್ತಿದೆ. ಅಲ್ಲಲ್ಲಿ ಸ್ವಲ್ಪ ಸುರಿದ ತುಂತುರು ಧಗೆಯನ್ನು ಮತ್ತುಷ್ಟು ಹೆಚ್ಚಿಸಿದೆ. ಒಂದೆಡೆ ನೀರಿನ ಸಮಸ್ಯೆ- ಇನ್ನೊಂದೆಡೆ ಉರಿಯುವ ಬಿಸಿಲು. ಇವೆರಡು ಜನತೆ ನರಳುವಂತೆ ಮಾಡಿವೆ.

ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲಿ ಇಂದು ಇದ್ದ ನೀರು ನಾಳೆ ಇಲ್ಲವಾಗುತ್ತಿದೆ. ಕಿಲೋ ಮೀಟರ್‌ಗಟ್ಟಲೆ ದೂರದ ತೋಟಗಳಿಗೆ ಅಲೆದು ನೀರು ತರುವುದು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ.

ನೀರಿನ ಸಮಸ್ಯೆ ಉಲ್ಬಣಕ್ಕೆ ವಿದ್ಯುತ್ ಸಮಸ್ಯೆ ಬಹಳಷ್ಟು ಕೊಡುಗೆ ನೀಡುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿದ್ದರೂ ಆ ನೀರನ್ನು ಗ್ರಾಮಕ್ಕೆ ಪೂರೈಸಲು ವಿದ್ಯುತ್ ಇರುವುದಿಲ್ಲ ಎಂಬುದು ಬಹುತೇಕ ಗ್ರಾಮಗಳಲ್ಲಿ ಕೇಳಿ ಬರುತ್ತಿರುವ ಸಾಮಾನ್ಯ ಆರೋಪ.

`ಜಿಲ್ಲೆಯ ಒಟ್ಟು 660 ಗ್ರಾಮಗಳ ಪೈಕಿ ಅಂದಾಜು 100 ಗ್ರಾಮಗಳ 4 ಲಕ್ಷಕ್ಕೂ ಅಧಿಕ ಜನರಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದ್ದೇವೆ~ ಎಂದು ಜಿಲ್ಲಾ ಆಡಳಿತ ಲೆಕ್ಕ ಒಪ್ಪಿಸುತ್ತಿದೆ.

`ಟ್ಯಾಂಕರ್‌ಗಳ ಮೂಲಕ ನೀರು ಪೂರೈಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮೂರಿಗೆ ದಿನಕ್ಕೆ ಬರುತ್ತಿರುವುದು ಒಂದೆರಡು ಟ್ರಿಪ್ ನೀರು ಮಾತ್ರ. ಇಡೀ ದಿನ ಕಾಯ್ದರೂ ಐದಾರು ಕೊಡ ನೀರು ಸಹ ದೊರೆಯುವುದಿಲ್ಲ~ ಎಂಬುದು ಗ್ರಾಮೀಣ ಜನತೆಯ ಅಳಲು.

ಮಳೆಯ ಕೊರತೆಯಿಂದ ಜಿಲ್ಲೆಯ 262 ಗ್ರಾಮಗಳಲ್ಲಿ ಮುಂಗಾರು ಇಳುವರಿ ಹಾಗೂ 281 ಗ್ರಾಮಗಳಲ್ಲಿ ಹಿಂಗಾರು ಇಳುವರಿ  ಶೇ.25ಕ್ಕಿಂತಲೂ ಕಡಿಮೆ ಬಂದಿದೆ. ಕೃಷಿ ಬೆಳೆ ಹಾನಿಗೆ ರೂ.70.82 ಕೋಟಿ, ತೋಟಗಾರಿಕೆ ಬೆಳೆ ಹಾನಿಗೆ ರೂ.52.46ಲಕ್ಷ ಸಹಾಯದನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪಸ್ತಾವ ಸಲ್ಲಿಸಲಾಗಿದೆ ಎಂದು ಜಿಲ್ಲಾ ಆಡಳಿತ ಹೇಳುತ್ತಿದೆ.

`ಒಬ್ಬ ರೈತರಿಗೂ ಬೆಳೆ ಹಾನಿ ಪರಿಹಾರ ವಿತರಣೆಯಾಗಿಲ್ಲ. ಬೆಳೆ ಹಾನಿಯ ಸಮರ್ಪಕ ಅಧ್ಯಯನವೂ ನಡೆದಿಲ್ಲ~ ಎಂದು ರೈತರು ಹೇಳುತ್ತಿದ್ದಾರೆ.

ಬಾರದ ನೀರು
ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 1.9 ಟಿಎಂಸಿ ಅಡಿ ನೀರು ಬಿಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ನೀಡಿರುವ ಭರವಸೆ ಇನ್ನೂ ಈಡೇರಿಲ್ಲ. ಕೊಯ್ನಾ ಜಲಾಶಯದಿಂದ ನೀರೂ ಬಿಡುಗಡೆಯಾಗಿಲ್ಲ. ಹೀಗಾಗಿ ಕೃಷ್ಣಾ ನದಿ ತೀರದ ಬವಣೆಯೂ ತಪ್ಪಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.