ಸಿಂದಗಿ: ಮಹಿಳಾ ದೌರ್ಜನ್ಯ ತಡೆಗಟ್ಟಲು ನಿರಂತರವಾಗಿ ಜಾಗೃತಿ ಶಿಬಿರ ಹಮ್ಮಿಕೊಳ್ಳುತ್ತಿದ್ದರೂ ಅವರ ರಕ್ಷಣೆಗಾಗಿ ಕಾನೂನುಗಳಿದ್ದರೂ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಶೋಷಣೆ, ದೌರ್ಜನ್ಯ ನಿಂತಿಲ್ಲ ಎಂದು ವಕೀಲರಾದ ಗೀತಾ ಸಿಂಗೆ ವಿಷಾದಿಸಿದರು.
ಶನಿವಾರ ನಗರದ ಗುರುಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ–2006 ಕಾರ್ಯಾಗಾರದಲ್ಲಿ ಮಹಿಳಾ ದೌರ್ಜನ್ಯ ತಡೆ ಕಾಯ್ದೆ–2005 ಕುರಿತು ಉಪನ್ಯಾಸ ನೀಡಿದರು.
ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಮಹಿಳೆಯರು ಕೌಟುಂಬಿಕ ಹಿಂಸೆ ಅನುಭವಿಸುವುದು ಸಾಮಾನ್ಯವಾಗಿದೆ. ಮನೆಯಲ್ಲಿ ಪ್ರಾರಂಭಗೊಳ್ಳುವ ಲಿಂಗತಾರತಮ್ಯ ನೀತಿ ದೂರಾದಾಗಲೇ ಮಹಿಳೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಾಧ್ಯ ಎಂದರು.
ಮಹಿಳೆಯರು ದೌರ್ಜನ್ಯ ಸಹಿಸಿಕೊಳ್ಳಬಾರದು. ಅದರ ವಿರುದ್ಧ ಸಿಡಿದೇಳಬೇಕು. ಕಾನೂನು ನೆರವು ಪಡೆದುಕೊಳ್ಳಬೇಕು. ವರದಕ್ಷಿಣೆ ಇಲ್ಲದೇ ಮದುವೆ ಆಗುತ್ತೇವೆ ಎಂಬ ಸಂಕಲ್ಪ ಮಹಿಳೆಯರದ್ದಾಗಬೇಕು. ಆ ದಿಸೆಯಲ್ಲಿ ತಂದೆ–ತಾಯಿಗಳು ಹೆಣ್ಣು ಮಕ್ಕಳನ್ನು ಗಟ್ಟಿಗರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
‘ಬಾಲ್ಯ ವಿವಾಹ ನಿಷೇಧ ಕಾಯ್ದೆ–2006 ಕುರಿತು ಎ.ಎಂ.ಅಂಗಡಿ ವಕೀಲ ಮಾತನಾಡಿ, ಬಾಲ್ಯವಿವಾಹಕ್ಕೆ ಉತ್ತೇಜನ ನೀಡುವವರಿಗೆ ಕಾನೂನು ಕಠಿಣ ಶಿಕ್ಷೆ ನೀಡುತ್ತದೆ ಎಂದು ತಿಳಿಸಿದರು. ಎಸ್.ಬಿ.ಖಾನಾಪುರ ವಕೀಲ ಮಾತನಾಡಿ, ‘ದೇವದಾಸಿ ಪದ್ಧತಿಯ ನಿರ್ಮೂಲನೆ ಕಾಯ್ದೆ’ ಮತ್ತು ವಕೀಲ ಅರವಿಂದ ಕನ್ನೂರ ‘ಮಹಿಳಾ ಆಸ್ತಿ ಹಕ್ಕು ಕಾಯ್ದೆ’ ಕುರಿತು ಮಾತನಾಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಆರ್.ಕುಲಕರ್ಣಿ ಕಾರ್ಯಾಗಾರ ಉದ್ಘಾಟಿಸಿದರು. ಕಿರಿಯ ಶ್ರೇಣಿ ನ್ಯಾಯಾಧೀಶ ಬಿ.ವೆಂಕಟಪ್ಪ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಜಿ.ಎಸ್.ಮಳಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಎಸ್. ಗುಣಾರಿ, ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ನೆಲ್ಲಗಿ ಇದ್ದರು. ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಬಾಲ್ಯ ವಿವಾಹ ತಡೆಗಟ್ಟಬೇಕಿದೆ. ಮಹಿಳೆ ಮತ್ತು ಮಕ್ಕಳ ಸಾಗಣೆ ನಿಲ್ಲಲಿ
ಎ.ಎಂ.ಅಂಗಡಿ,
ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.