ADVERTISEMENT

ನೀರಾವರಿ ಕಾಮಗಾರಿಗೆ ತಡೆಯೊಡ್ಡಿದರೆ ಜನಾಂದೋಲನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:45 IST
Last Updated 7 ಜನವರಿ 2012, 5:45 IST

ವಿಜಾಪುರ: `ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ಬಗ್ಗೆ ತಗಾದೆ ತೆಗೆದಿರುವ ಅಧಿಕಾರಿಗಳನ್ನು ಸರ್ಕಾರ ಹದ್ದುಬಸ್ತಿನಲ್ಲಿಡಬೇಕು. ಇಲ್ಲದಿದ್ದರೆ ನಾವೇ ಅವರನ್ನು ಹುಡುಕಿ ದಿಗ್ಬಂಧನ ಹಾಕುತ್ತೇವೆ. ನಮ್ಮ ಯೋಜನೆಗಳಿಗೆ ಅಡ್ಡಿ ಪಡಿಸುವ ಯಾವುದೇ ಶಕ್ತಿ ಇದ್ದರೂ ಅದರ ವಿರುದ್ಧ ಜನಾಂದೋಲನ ರೂಪಿಸುತ್ತೇವೆ~ ಎಂದು ಕೃಷ್ಣಾ-ಭೀಮಾ ಸಮನ್ವಯ ಸಮಿತಿಯ ಗೌರವ ಅಧ್ಯಕ್ಷ ಡಾ.ಕೃಷ್ಣ ಕೊಲ್ಹಾರಕುಲಕರ್ಣಿ, ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಹೇಳಿದರು.

ಉತ್ತರ ಕರ್ನಾಟಕದ ಯೋಜನೆಗಳ ಬಗ್ಗೆ ರಾಜಧಾನಿಯಲ್ಲಿ ನಿರ್ಲಕ್ಷ್ಯ ಇದ್ದೇ ಇದೆ. ನೀರಾವರಿ ಯೋಜನೆಗಳು ಸದ್ಯ ಅನುಷ್ಠಾನಗೊಳ್ಳಬಾರದು ಎಂಬ ದುರುದ್ದೇಶದಿಂದ ಅಧಿಕಾರಿಗಳು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

`ಯುಕೆಪಿ-3 ರಾಜ್ಯದ ಆರು ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆ. ಬೆಂಗಳೂರು ನಗರದಲ್ಲಿ 28 ಸಾವಿರ ಕೋಟಿ ರೂಪಾಯಿ ಮೆಟ್ರೋ ರೈಲ್ವೆ ಯೋಜನೆಗೆ ಕಣ್ಣು ಮುಚ್ಚಿ ಒಪ್ಪಿಗೆ ನೀಡುವ ಇವರು, ನಮ್ಮ ರೈತರ ಅನ್ನದ ಪ್ರಶ್ನೆ ಬಂದಾಗ ಏಕೆ ತಗಾದೆ ತೆಗೆಯುತ್ತಾರೆ~ ಎಂದು ಪ್ರಶ್ನಿಸಿದರು.

ನಮ್ಮ ಭಾಗದ ಅಭಿವೃದ್ಧಿಯ ನಿರ್ಲಕ್ಷ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯಕ್ಕೆ ಹೋರಾಡಬೇಕಾಗುತ್ತದೆ ಎಂದು ಶಾಸಕ ಎಂ.ಬಿ. ಪಾಟೀಲ ಹೇಳಿದ್ದಾರೆ. ಈ ಹೋರಾಟಕ್ಕೆ ನಾಂದಿಯಾಗಲಿ ಎಂಬಂತೆ ಬೆಂಗಳೂರಿನಲ್ಲಿರುವ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಆಲಮಟ್ಟಿ ಜಲಾಶಯದಲ್ಲಿ 524.256 ಮೀಟರ್ ವರೆಗೆ ನೀರು ಸಂಗ್ರಹಿಸಲು ಹಿಂದೆಯೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಲಾಶಯಕ್ಕೆ ಅಷ್ಟು ಎತ್ತರದ ಗೇಟ್‌ಗಳನ್ನೂ ಸಹ ಅಳವಡಿಸಲಾಗಿತ್ತು. ಹಾಗಿದ್ದರೆ ಆಗಿನ ಅಧಿಕಾರಿಗಳು ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಒಟ್ಟು ಭೂಮಿ, ಸಂತ್ರಸ್ತರ ವಿವರವಾದ ವರದಿ ಸಿದ್ಧಪಡಿಸದೆ ಈ ಯೋಜನೆ ಸಿದ್ಧಪಡಿಸಿದ್ದರೇ ಎಂದು ಪ್ರಶ್ನಿಸಿದರು.

ಜಲಾಶಯದಲ್ಲಿ ಈಗ 519.6 ಮೀಟರ್ ವರೆಗೆ ನೀರು ಸಂಗ್ರಹಿಸುತ್ತಿದ್ದರೂ ಆಗಲೇ 521 ಮೀಟರ್ ವರೆಗಿನ ಪ್ರದೇಶದವರಿಗೆ ಪರಿಹಾರ ನೀಡಲಾಗಿದೆ. ಇದು ಅಧಿಕಾರಿಗಳಿಗೆ ಗೊತ್ತಿಲ್ಲವೇ? ಈ ಯೋಜನೆಗೆ 1997ರಲ್ಲಿಯೇ ಕೇಂದ್ರ ಜಲ ಆಯೋಗದ ಅನುಮೋದನೆ ದೊರೆತಿದೆ. ಮುಂದಿನ ಬಜೆಟ್‌ನಲ್ಲಿ ಈ ಯೋಜನೆಗಳಿಗೆ ಪ್ರತ್ಯೇಕ ಹಣ ನೀಡುವುದು ಮುಖ್ಯಮಂತ್ರಿಗಳ ಜವಾಬ್ದಾರಿ. ಈ ತಗಾದೆಗೆ ಅವರು ಹಿಂಜರಿಯಬಾರದು. ಅಗತ್ಯ ಅನುದಾನ ನೀಡಿದ್ದರೆ ಅದು ಆಂದೋಲನಕ್ಕೆ ನಾಂದಿಯಾಗುತ್ತದೆ ಎಂದರು.

ಎಲ್ಲ ರಾಜಕೀಯ ಮುಖಂಡರು ಈ ನೀರಾವರಿ ವಿಷಯವನ್ನು ತಾರ್ಕಿಕ ಅಂತ್ಯದವರೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆಡಳಿತಾತ್ಮಕ ಅನುಮೋದನೆ ಒಂದು ಮಹತ್ವದ ಹೆಜ್ಜೆ. ಅದು ದೊರೆಯದ ಹೊರತು ಮುಂದಿನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

1976ರಲ್ಲಿ ಬಚಾವತ್ ತೀರ್ಪು ಬಂದ ಮೇಲೆ ಯುಕೆಪಿ ಮೊದಲ ಹಂತದ ಯೋಜನೆಗಳ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲು ಹತ್ತು ವರ್ಷಕ್ಕೂ ಅಧಿಕ ಸಮಯ ಬೇಕಾಯಿತು. 30 ವರ್ಷ ಕಳೆದರೂ ಇನ್ನೂ ಈ ಯೋಜನೆ ಪೂರ್ಣಗೊಂಡಿಲ್ಲ. ಪ್ರಾರಂಭದಲ್ಲಿ ಕೇವಲ 300 ಕೋಟಿ ರೂಪಾಯಿಯ ಯೋಜನೆ ಈಗ 30 ಸಾವಿರ ಕೋಟಿಗಿಂತ ಅಧಿಕವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.