ADVERTISEMENT

‘ನೀವೂ ಯಾರಿಂದ ದೇಶಭಕ್ತಿ ಕಲಿತಿದ್ದೀರಿ?’

ಪ್ರಧಾನಿ ಮೋದಿ ವಿರುದ್ಧ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 8 ಮೇ 2018, 14:41 IST
Last Updated 8 ಮೇ 2018, 14:41 IST
ವಿಜಯಪುರದಲ್ಲಿ ಸೋಮವಾರ ರಾತ್ರಿ ನಡೆದ ‘ಸಂವಿಧಾನ ಉಳಿಸಿ’ ಜಾಗೃತಿ ಸಮಾವೇಶದಲ್ಲಿ ಜಿಗ್ನೇಶ್‌ ಮೇವಾನಿ ಮಾತನಾಡಿದರು
ವಿಜಯಪುರದಲ್ಲಿ ಸೋಮವಾರ ರಾತ್ರಿ ನಡೆದ ‘ಸಂವಿಧಾನ ಉಳಿಸಿ’ ಜಾಗೃತಿ ಸಮಾವೇಶದಲ್ಲಿ ಜಿಗ್ನೇಶ್‌ ಮೇವಾನಿ ಮಾತನಾಡಿದರು   

ವಿಜಯಪುರ: ‘ನಾಯಿಯಿಂದ ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ. ಭಗತ್‌ ಸಿಂಗ್‌, ಸುಖದೇವ, ರಾಜಗುರು ಅವ ರಿಂದ ದೇಶಭಕ್ತಿ ಕಲಿಯಬೇಕಿದೆ’ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದರು.

‘ನೀವೂ ಯಾರಿಂದ ದೇಶ ಭಕ್ತಿ ಕಲಿತಿದ್ದೀರಿ?’ ಎಂದು ಮೋದಿ ಪ್ರಶ್ನಿಸಿದ ಮೇವಾನಿ, ಭಾನುವಾರ ಜಮಖಂಡಿಯಲ್ಲಿ ಕಾಂಗ್ರೆಸ್ಸಿಗರನ್ನು ಹೀಯಾಳಿಸಿದ್ದ ಪ್ರಧಾನಿಯನ್ನು, ಸೋಮವಾರ ರಾತ್ರಿ ವಿಜಯಪುರದಲ್ಲಿ ನಡೆದ ‘ಸಂವಿಧಾನ ಉಳಿಸಿ’ ಜಾಗೃತಿ ಸಮಾವೇಶದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡರು.

’ತನ್ನಷ್ಟಕ್ಕೆ ತನ್ನನ್ನು ರಾಷ್ಟ್ರದ ಚೌಕಿದಾರ ಎಂದು ನವದೆಹಲಿಯ ಕೆಂಪುಕೋಟೆ ಮೇಲೆ ಸ್ವಯಂ ಘೋಷಿಸಿಕೊಂಡವ, ಇಂದು ಆ ಕೆಂಪು ಕೋಟೆಯನ್ನೇ ಮಾರಾಟ ಮಾಡಿದ್ದಾನೆ. ಇವ ಚೌಕಿದಾರನಲ್ಲ. ನಂಬರ್‌ ಒನ್ ಕಳ್ಳ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಬಿಜೆಪಿಗರಿಂದ ‘ಬೇಟಿ ಬಚಾವೋ’ ಆಗಬೇಕಿದೆ. 50ಕ್ಕೂ ಹೆಚ್ಚು ಸಂಸದರ ವಿರುದ್ಧ ಅತ್ಯಾಚಾರ, ಮಹಿಳಾ ದೌರ್ಜನ್ಯದ ಪ್ರಕರಣ ದಾಖಲಾಗಿವೆ. ಇದೊಂದು ನಾಚಿಕೆಗೇಡಿನ ಸಂಗತಿ’ ಎಂದು ಕಿಡಿಕಾರಿದರು. ‘56 ಇಂಚಿನ ಎದೆ ಹೊಂದಿದವನೇ, ನೀರವ್‌ ಮೋದಿ ದೇಶ ಬಿಟ್ಟು ಪಲಾಯನ ಮಾಡಿ ದಾಗ ಎಲ್ಲಿ ಅಡಗಿತ್ತು ನಿನ್ನೆದೆ’ ಎಂದು ಪ್ರಶ್ನಿಸಿದ ಜಿಗ್ನೇಶ್‌,

‘ಕರ್ನಾಟಕದ ಜನತೆ ಬಸವ ಭಕ್ತರಿಗೆ ಮತ ನೀಡಿ. ಗೋಲ್ವಾಲ್ಕರ್‌ ಸಂತತಿಗೆ ಬೇಡ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದಕ್ಷಿಣ ಭಾರತದಾದ್ಯಂತ ಜಾತಿಯ ವಿಷ ಬೀಜ ಬಿತ್ತಲಿದೆ. ಮತ ಹಾಕುವ ಮುನ್ನ ಮತ್ತೊಮ್ಮೆ ಯೋಚಿಸಿ’ ಎಂದು ಮನವಿ ಮಾಡಿದರು.

‘ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳ ಜತೆ ನಂಟು ಹೊಂದಿರುವ ವ್ಯಕ್ತಿಗೆ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ನೀಡಿರುವುದನ್ನು ಮಂಗಳವಾರ ವಿಜಯಪುರಕ್ಕೆ ಭೇಟಿ ನೀಡಿದಾಗ ನೀವುಗಳು ಪ್ರಶ್ನಿಸಿ’ ಎಂದು ಜಿಗ್ನೇಶ ನೆರೆದಿದ್ದ ಜನಸ್ತೋಮಕ್ಕೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.