ADVERTISEMENT

ಪಕ್ಷೇತರ ಅಭ್ಯರ್ಥಿಯಾಗಿ ವಿಮಲಾಬಾಯಿ ದೇಶಮುಖ

ಕೂಡಲಸಂಗಮದ ಶ್ರೀಗಳ ಮನವೊಲಿಕೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 10:16 IST
Last Updated 17 ಏಪ್ರಿಲ್ 2013, 10:16 IST

ಮುದ್ದೇಬಿಹಾಳ: ತಾಲ್ಲೂಕಿನ ನಾಲತವಾಡದ ವಿಮಲಾಬಾಯಿ ದೇಶಮುಖ ಅವರು ಕೊನೆಗೂ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದರು.

ಮಂಗಳವಾರ ಬೆಳಿಗ್ಗೆಯಿಂದ ಸಂಜೆ ಯವರೆಗೆ ಸತತ ಕೂಡಲಸಂಗಮದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರುಗಳಾದ  ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ವಿಮಲಾಬಾಯಿ ದೇಶಮುಖ ಅವರೊಂದಿಗೆ  ಮಾತುಕತೆ ನಡೆಸಿದ್ದರ ಫಲವಾಗಿ  ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಲು ಒಪ್ಪಿಕೊಂಡರು.

ತಮ್ಮ ಅನಾರೋಗ್ಯದ ಕಾರಣ ಸ್ಪರ್ಧೆಯಿಂದಲೇ ಹಿಂದೆ ಸರಿಯುವ ನಿರ್ಧಾರವನ್ನು ದೇಶಮುಖ ಮಾಡಿದ್ದರು.

ಆದರೆ ದೇಶಮುಖರ ಅಭಿಮಾನಿ ಗಳು ಅವರು ಸ್ಪರ್ಧೆಗೆ ನಿಲ್ಲಲೇಬೇಕು ಎಂದು ಆಗ್ರಹಿಸಿ ಅವರ ಮನೆಗೆ ಸತತ ಎಡತಾಕಿದ್ದರು. ಇದೇ ವೇಳೆ ಜೆ.ಡಿ.ಎಸ್. ಟಿಕೆಟ್ ತಮ್ಮ ಕೈತಪ್ಪಿದ್ದರಿಂದ ಬೇಸರಗೊಂಡಿದ್ದ ಅವರು, ಜೆ.ಡಿ.ಎಸ್.ನ ಬಂಡಾಯ ಅಭ್ಯರ್ಥಿಯಾಗಿ ಪ್ರಕಟಿಸಿದ್ದರು.

ಆದರೆ ಮಂಗಳವಾರ ಬೆಳಿಗ್ಗೆ ವಿಜಾಪುರದ ಅವರ ನಿವಾಸಕ್ಕೆ ಭೇಟಿ ನೀಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ವಿಮಲಾಬಾಯಿ ಅವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಮನವೊಲಿಸಿದರು.

ಕಳೆದ ಚುನಾವಣೆಯಲ್ಲಿ ದೇಶಮುಖ ಅವರಿಂದ ಸಿಡಿದು ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಎಂ.ಎಸ್.ಪಾಟೀಲ ಅವರು ಸಹ ವಿಮಲಾಬಾಯಿ ದೇಶಮುಖ ಬೆಂಬಲಕ್ಕೆ ನಿಲ್ಲಬೇಕು ಎಂಬ ಶರತ್ತನ್ನು ಶ್ರೀಗಳು ವಿಧಿಸಿದ್ದಾರೆ. ಸಂಧಾನ ಮಾತುಕತೆಯಲ್ಲಿ  ಎಂ.ಎಸ್.ಪಾಟೀಲ, ಮಹಾಂತಪ್ಪ ನಾವದಗಿ, ಎ.ಜಿ. ಗಂಗನಗೌಡ್ರ ಸಾಹುಕಾರ, ಶಾಂತಪ್ಪ ಕಮತ, ಬಸವರಾಜ ತಿರಮುಖೆ, ಮುತ್ತು ಅಂಗಡಿ, ಚಂದ್ರಶೇಖರ ಮೇಟಿ, ಬಿ.ಬಿ.ಪಾಟೀಲ, ಬಸವರಾಜ ಕತ್ತಿ, ಮಲ್ಲಣ್ಣ ಹತ್ತಿ, ಭೀಮನಗೌಡ ಪಾಟೀಲ ಮೊದಲಾದವರಿದ್ದರು.

ಕೆ.ಜೆ.ಪಿ.ಟಿಕೆಟ್‌ಗೆ ಯತ್ನ?
ವಿಮಲಾಬಾಯಿ ದೇಶಮುಖ ಅವರು ಕೊನೆಗಳಿಗೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆ.ಜೆ.ಪಿ. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂದು ಹೆಸರು ಹೇಳಲು ಇಚ್ಛಿಸದ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.